ಕಲ್ಕತ್ತಾದ ಕುಖ್ಯಾತ ಕಮಿಷನರ್‌ ಮೇಲಿನ ಬಾಂಬ್‌ ದಾಳಿ ಪ್ರಕರಣದಲ್ಲಿ ಸೆಲ್ಯುಲಾರ್ ಜೈಲು ಸೇರಿದ್ದರು ಡಾ.ಬಸು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ರಾಷ್ಟ್ರೀಯವಾದಿ ಹೋರಾಟಗಾರ ಡಾ.ಭೂಪಾಲ್ ಬಸು(1902 -1981) ಅವರು‌ ಢಾಕಾ (ಈಗಿನ ಬಾಂಗ್ಲಾದೇಶ)ದಲ್ಲಿ ಜನಿಸಿದರು ಎಂಬ ವಿಚಾರದ ಹೊರತಾಗಿ ಅವರ ಆರಂಭಿಕ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
ಕಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ಬಸು ಅವರು ಕಲ್ಕತ್ತಾದ ಹೆಸರಾಂತ ವೈದ್ಯರಾದ ಡಾ. ಅಮಿಯಾ ಕುಮಾರ್ ಬಸು ಅವರ ರಾಷ್ಟ್ರೀಯವಾದಿ ಗುಂಪಿನಲ್ಲಿದ್ದರು ಮತ್ತು ಸ್ವಾತಂತ್ರ್ಯ ಹೋರಾಟಗಾರ ಭೂಪೇಂದ್ರನಾಥ ದತ್ತ ಅವರಿಗೆ ಸಹವರ್ತಿಯಾಗಿದ್ದರು.  ಬಸು ಅವರು ದತ್ತರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದರಾದರೂ ಬಾಂಬ್ ತಯಾರಿಕೆಯಲ್ಲಿ ಭೂಪಾಲ್ ಬಸು ಅವರ ನೇರ ಪಾಲ್ಗೊಳ್ಳುವಿಕೆ ಬಗ್ಗೆ ಎಲ್ಲಿಯೂ ಮಾಹಿತಿಯಿರಲಿಲ್ಲ. ಆದರೆ ಅವರು ಭೂಪೇಂದ್ರನಾಥ ಅವರಿಗೆ ತುಂಬಾ ಹತ್ತಿರವಾಗಿದ್ದರು.
25 ಆಗಸ್ಟ್ 1930ರಂದು ಕಲ್ಕತ್ತದ ಡಾಲ್‌ಹೌಸಿ ಸ್ಕ್ವೇರ್‌ನಲ್ಲಿ ಕ್ರಾಂತಿಕಾರಿಗಳಾದ ದಿನೇಶ್‌ಚಂದ್ರ ಮಜುಂದಾರ್ ಮತ್ತು ಅನುಜಾಚರಣ್ ಸೇನ್ ಅವರು ಕಲ್ಕತ್ತಾದ ಕುಖ್ಯಾತ ಪೊಲೀಸ್ ಕಮಿಷನರ್ ಚಾರ್ಲ್ಸ್ ಟೆಗಾರ್ಟ್ ಮೇಲೆ ಬಾಂಬ್ ಎಸೆದರು. ಅನುಜಾಚರಣ್ ಸೇನ್ ಸ್ಫೋಟದಲ್ಲಿ ಸಾವನ್ನಪ್ಪಿದರೆ, ದಿನೇಶ್ಚಂದ್ರರನ್ನು ಸ್ವಲ್ಪ ದೂರದಲ್ಲಿ ಬಂಧಿಸಲಾಯಿತು. ಈ ಪ್ರಕರಣದಲ್ಲಿ ಡಾ.ಬಸು ಪಾಲ್ಗೊಂಡಿದ್ದರ ಬಗ್ಗೆ ಪ್ರಾರಂಭದಲ್ಲಿ ಯಾವುದೇ ಪುರಾವೆಯಿರಲಿಲ್ಲ. ಆದರೆ ಡಾಲ್ಹೌಸಿ ಸ್ಕ್ವೇರ್ ಬಾಂಬ್ ಪ್ರಕರಣ ಮತ್ತು ಕಲ್ಕತ್ತಾ ಬಾಂಬ್ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಬಸು ಅವರ ಹೆಸರು ಹೊರಹೊಮ್ಮಿತು ಮತ್ತು ವಿಚಾರಣೆಯ ನೆಪದಲ್ಲಿ ಅವರನ್ನು ಅಲಿಪೋರ್ ಸೆಂಟ್ರಲ್ ಜೈಲಿನಲ್ಲಿ ಬಂಧಿಸಿಡಲಾಯಿತು.
ಅಂತಿಮವಾಗಿ ವಿಶೇಷ ನ್ಯಾಯಾಲಯವು ಡಾ.ನಾರಾಯಣ ರಾಯ್ ಜೊತೆಗೆ ಡಾ.ಬಸುಗೆ ಕಠಿಣ ಶಿಕ್ಷೆ ವಿಧಿಸಿ ಸೆಲ್ಯುಲಾರ್ ಜೈಲಿಗೆ ಕಳುಹಿಸಿತು. 1938 ರಲ್ಲಿ ಬಿಡುಗಡೆಯಾದ ಡಾ. ಬಸು ತಮ್ಮ ನಂತರದ ಜೀವನದಲ್ಲಿ ರಾಜಕೀಯದಿಂದ ದೂರವಾಗಿ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಕಲ್ಕತ್ತಾದ ಗಲಭೆ ಸಂತ್ರಸ್ತರಿಗೆ ತಮ್ಮ ಸಹಾಯ ಹಸ್ತ ಚಾಚಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!