August 20, 2026
Thursday, August 20, 2026
spot_img

ಲಡಾಖ್ ಚೆಕ್‌ಪೋಸ್ಟ್‌ನಲ್ಲಿ ಹೈಡ್ರಾಮಾ: ‘We Are Gen Z’ ಎಂದ ಯುವತಿಗೆ ಖಡಕ್ ಕೌಂಟರ್ ಕೊಟ್ಟ ಓಮರ್ ಅಬ್ದುಲ್ಲಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಡಾಖ್‌ನ ಮಿನಿಮಾರ್ಗ್ ಚೆಕ್‌ಪೋಸ್ಟ್‌ನಲ್ಲಿ ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ಪ್ರವಾಸಿಗ ಯುವತಿಯೊಬ್ಬರು ವಾಗ್ವಾದ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

ಯುವತಿ ವಿಡಿಯೋದಲ್ಲಿ “We are Gen Z” ಎಂದು ಹೇಳಿರುವುದನ್ನು ಉಲ್ಲೇಖಿಸಿದ ಓಮರ್ ಅಬ್ದುಲ್ಲಾ, ಇಂತಹ ಮಾತುಗಳನ್ನು ಬೆದರಿಕೆಯ ರೀತಿಯಲ್ಲಿ ಬಳಸುವುದು Gen Zಗೆ ಇರುವ ಸಕಾರಾತ್ಮಕ ಅಭಿಪ್ರಾಯಕ್ಕೆ ಧಕ್ಕೆ ತರಬಹುದು ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಜುಲೈ 25ರಂದು ಲಡಾಖ್‌ನ ಕಾರ್ಗಿಲ್ ಜಿಲ್ಲೆಯ ಡ್ರಾಸ್ ಸಮೀಪದ ಮಿನಿಮಾರ್ಗ್ ಚೆಕ್‌ಪೋಸ್ಟ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಹಲವು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರವಾಸಿಗರ ಗುಂಪೊಂದು ಅಸಮಾಧಾನಗೊಂಡಿತ್ತು. ಈ ವೇಳೆ ಯುವತಿಯೊಬ್ಬರು ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

‘We Are Gen Z’ ಹೇಳಿಕೆ ವೈರಲ್

“ನಾವು Gen Z, ಇಂತಹ ವಿಚಾರಗಳನ್ನು ಸಹಿಸುವುದಿಲ್ಲ” ಎಂದು ಯುವತಿ ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ, ಕುಟುಂಬಗಳು ಹಾಗೂ ಮಕ್ಕಳು ರಸ್ತೆಯಲ್ಲಿ ಸಿಲುಕಿದ್ದಾರೆ ಎಂದು ಆಕೆ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.

ಸಂಚಾರ ನಿರ್ಬಂಧಕ್ಕೆ ಕಾರಣವೇನು?

ವರದಿಗಳ ಪ್ರಕಾರ, ಜುಲೈ 25ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಸೇನಾ ಮುಖ್ಯಸ್ಥರು ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮಕ್ಕಾಗಿ ಡ್ರಾಸ್ ಕಡೆಗೆ ತೆರಳುತ್ತಿದ್ದರು. ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಪ್ರಯಾಣ ಸಾಧ್ಯವಾಗದ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಂದ ಮಾರ್ಗದಲ್ಲಿ ತಾತ್ಕಾಲಿಕ ಸಂಚಾರ ನಿರ್ಬಂಧ ವಿಧಿಸಲಾಗಿತ್ತು ಎನ್ನಲಾಗಿದೆ.

ಓಮರ್ ಅಬ್ದುಲ್ಲಾ ಹೇಳಿದ್ದೇನು?

ಈ ವಿಡಿಯೋ ಕುರಿತು ಪ್ರತಿಕ್ರಿಯಿಸಿದ ಓಮರ್ ಅಬ್ದುಲ್ಲಾ, “We are Gen Z” ಎಂಬ ಮಾತು ಹೊಸ ತಲೆಮಾರಿನ ಗುರುತಾಗುವುದಕ್ಕಿಂತ “ಜಾಂತೇ ನಹೀಂ ಹೋ ಮೇರಾ ಬಾಪ್ ಕೌನ್ ಹೈ” ಎಂಬ ಸಾಂಪ್ರದಾಯಿಕ ದರ್ಪದ ಮಾತಿನಂತಾಗಬಾರದು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. Gen Z ಎಂಬ ಗುರುತನ್ನು ಸಣ್ಣಪುಟ್ಟ ವಿಚಾರಗಳಲ್ಲೂ ಒತ್ತಡ ಅಥವಾ ಬೆದರಿಕೆಯ ಸಾಧನವಾಗಿ ಬಳಸಿದರೆ, ಆ ಪೀಳಿಗೆ ಬಗ್ಗೆ ಇರುವ ಉತ್ತಮ ಅಭಿಪ್ರಾಯವೇ ಕುಗ್ಗಬಹುದು ಎಂಬುದು ಅವರ ಸಂದೇಶವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !