April 12, 2026
Sunday, April 12, 2026
spot_img

ಒಮಾನ್‌ನ ಸೊಹಾರ್ ನಗರದ ಮೇಲೆ ಡ್ರೋನ್ ದಾಳಿ: ಇಬ್ಬರು ಭಾರತೀಯರ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಮಾನ್‌ನ ಸೊಹಾರ್ ನಗರದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟು, ಇತರ 10 ಮಂದಿ ಗಾಯಗೊಂಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅಸೀಮ್ ಆರ್. ಮಹಾಜನ್, ‘ಸೊಹಾರ್ ನಗರದಲ್ಲಿ ನಡೆದ ಘಟನೆಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದಾರೆ. ಅವರ ಕುಟುಂಬಗಳಿಗೆ ನಾವು ತೀವ್ರ ಸಂತಾಪ ಸೂಚಿಸುತ್ತೇವೆ. ಗಾಯಗೊಂಡ 11 ಜನರಲ್ಲಿ 10 ಮಂದಿ ಭಾರತೀಯರಾಗಿದ್ದಾರೆ. ಅವರಲ್ಲಿ ಐವರನ್ನು ಪ್ರಾಥಮಿಕ ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದ್ದು, ಉಳಿದ ಐವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾರಿಗೂ ಗಂಭೀರ ಸ್ವರೂಪದ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.

ರಾಯಭಾರ ಕಚೇರಿಯು ಸಂಬಂಧಪಟ್ಟ ಕಂಪನಿ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲಾ ನೆರವು ಒದಗಿಸುತ್ತಿದೆ ಎಂದು ಮಹಾಜನ್ ಹೇಳಿದ್ದಾರೆ.
ಒಮಾನ್‌ನ ಸರ್ಕಾರಿ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ವರದಿ ಮಾಡಿರುವ ‘ಅಲ್ ಜಜೀರಾ’, ಡ್ರೋನ್ ದಾಳಿಯಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ಶುಕ್ರವಾರ ಬೆಳಿಗ್ಗೆ ಡ್ರೋನ್‌ಗಳಲ್ಲಿ ಒಂದು ಅಲ್-ಅವಾಹಿ ಕೈಗಾರಿಕಾ ಪ್ರದೇಶಕ್ಕೆ ಅಪ್ಪಳಿಸಿದ್ದು, ಇಬ್ಬರು ವಿದೇಶಿಯರು ಮೃತಪಟ್ಟು, ಇತರರು ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !