June 27, 2026
Saturday, June 27, 2026
spot_img

ಯಾರನ್ನಾದರೂ ಡ್ರಾಪ್ ಮಾಡಿ, ವೈಭವ್‌ಗೆ ಚಾನ್ಸ್ ಕೊಡಿ! ಯುವ ಪ್ರತಿಭೆ ಪರ ಬ್ಯಾಟ್ ಬೀಸಿದ ಗವಾಸ್ಕರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ವಿಶ್ವ ಕ್ರಿಕೆಟ್ ಗಮನ ಸೆಳೆದಿರುವ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಬೆಂಬಲಕ್ಕೆ ಭಾರತದ ಬ್ಯಾಟಿಂಗ್ ದಂತಕಥೆ ಸುನೀಲ್ ಗವಾಸ್ಕರ್ ಧಾವಿಸಿದ್ದಾರೆ. “ವೈಭವ್ ಸೂರ್ಯವಂಶಿ ಭಾರತೀಯ ಕ್ರಿಕೆಟ್‌ಗೆ ಭಗವಂತ ನೀಡಿದ ಅದ್ಭುತ ಕೊಡುಗೆ” ಎಂದು ಬಣ್ಣಿಸಿರುವ ಗವಾಸ್ಕರ್, ಮುಂಬರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಈತನನ್ನು ತಕ್ಷಣವೇ ಭಾರತ ತಂಡಕ್ಕೆ ಆಯ್ಕೆ ಮಾಡಬೇಕು ಎಂದು ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯನ್ನು ಒತ್ತಾಯಿಸಿದ್ದಾರೆ.

ಸಚಿನ್ ತೆಂಡೂಲ್ಕರ್‌ಗೆ ಹೋಲಿಕೆ

ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಗವಾಸ್ಕರ್, “ನನಗೆ 15ನೇ ವಯಸ್ಸಿನಲ್ಲಿ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಮಾಡುವುದನ್ನು ನೋಡುವ ಅದೃಷ್ಟ ಸಿಕ್ಕಿತ್ತು. ಈಗ ಅದೇ ವಯಸ್ಸಿನಲ್ಲಿ ವೈಭವ್ ಆಟವನ್ನು ನೋಡುತ್ತಿದ್ದೇನೆ. ವೈಭವ್ ಬ್ಯಾಟಿಂಗ್ ಶೈಲಿಯಲ್ಲಿ ಯಾವುದೇ ಭಯವಿಲ್ಲ. ಅನುಭವಿ ಬೌಲರ್‌ಗಳ ಲೈನ್ ಮತ್ತು ಲೆಂತ್ ಅನ್ನು ಸುಲಭವಾಗಿ ಗ್ರಹಿಸಿ ಸಿಕ್ಸರ್‌ಗಳನ್ನು ಹೊಡೆಯುವ ಅವರ ಸಾಮರ್ಥ್ಯ ನಿಜಕ್ಕೂ ಗಾಡ್-ಗಿಫ್ಟೆಡ್” ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಐಪಿಎಲ್ 2026ರಲ್ಲಿ ದಾಖಲೆಯ ಸದ್ದು

ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸಿದ ವೈಭವ್, ಈ ಸೀಸನ್‌ನಲ್ಲಿ ಬರೋಬ್ಬರಿ 72 ಸಿಕ್ಸರ್‌ಗಳನ್ನು ಸಿಡಿಸಿ ಟೂರ್ನಿಯಲ್ಲೇ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 97 ರನ್‌ಗಳ ಭೀಕರ ಇನ್ನಿಂಗ್ಸ್ ಆಡುವ ಮೂಲಕ ಕ್ರಿಸ್ ಗೇಲ್ ಅವರ ಅತ್ಯಂತ ವೇಗದ ಐಪಿಎಲ್ ಶತಕದ ದಾಖಲೆಯನ್ನು ಮುರಿಯುವ ಸನಿಹ ಬಂದಿದ್ದರು.

“ಯಾರನ್ನಾದರೂ ಕೈಬಿಡಿ, ಈತನಿಗೆ ಜಾಗ ಕೊಡಿ”

ವೈಭವ್ ಸದ್ಯ ಇರುವ ಫಾರ್ಮ್ ಮತ್ತು ಪ್ರತಿಭೆಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಅವರು ಸಂಪೂರ್ಣ ಅರ್ಹರಾಗಿದ್ದಾರೆ. ತಂಡದ ಕಾಂಬಿನೇಷನ್ ನಿರ್ವಹಿಸಲು ಬೇರೆ ಯಾರನ್ನಾದರೂ ಡ್ರಾಪ್ ಮಾಡಬೇಕಾಗಿ ಬಂದರೂ ಆಯ್ಕೆಗಾರರು ಹಿಂಜರಿಯಬಾರದು. ಪ್ಲೇಯಿಂಗ್-11 ನಲ್ಲಿ ಜಾಗ ಸಿಗದಿದ್ದರೂ ಪರವಾಗಿಲ್ಲ, 15-16 ಆಟಗಾರರ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸಕ್ಕೆ ಈತನನ್ನು ಕಳುಹಿಸಬೇಕು ಎಂದು ಗವಾಸ್ಕರ್ ಪಟ್ಟು ಹಿಡಿದಿದ್ದಾರೆ. ಲಿಟಲ್ ಮಾಸ್ಟರ್ ಅವರ ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !