ಹೊಸದಿಗಂತ ವರದಿ ಯಾದಗಿರಿ:
ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಬರಗಾಲ ಆವರಿಸಿದ್ದು, ಸರ್ಕಾರ ಮಾತ್ರ ಕೆಲ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದು ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಆರೋಪಿಸಿದರು.
ಕಲ್ಯಾಲ ಕರ್ನಾಟಕ ಬಹುತೇಕ ಜಿಲ್ಲೆಗಳಲ್ಲಿ ಶೇ.75ರಷ್ಟು ಬರಗಾಲ ಆವರಿಸಿದೆ. ಆದರೆ, ರಾಜ್ಯ ಸರ್ಕಾರ ಆಯ್ದ ತಾಲೂಕುಗಳಲ್ಲಿ ಮಾತ್ರ ಬರವಿದೆ ರಂದು ಘೋಷಣೆ ಮಾಡಿದೆ. ಕಲಬುರಗಿ ಜಿಲ್ಲೆಯಲ್ಲಿ ಒಂದೂ ತಾಲೂಕು ಬರಗಾಲ ಪಟ್ಟಿಯಲ್ಲಿಲ್ಲ. ರಾಯಚೂರು, ಗದಗ, ಬೆಳಗಾವಿ, ಕೊಪ್ಪಳ ಹೀಗೆ ಅನೇಕ ಜಿಲ್ಲೆಗಳಲ್ಲಿ ಬಹುತೇಕ ತಾಲೂಕುಗಳಲ್ಲಿ ಬೆಳೆಹಾನಿ ಸಂಭವಿಸಿದೆ. ಆದರೆ, ಸರ್ಕಾರ ಅವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಿಕೊಂಡಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ 132 ತಾಲೂಕುಗಳಲ್ಲಿ 1 ಸಾವಿರ ಫೀಟ್ ಕೆಳಗಡೆ ಹೋದರೆ ನೀರು ಸಿಗುತ್ತಿಲ್ಲ. ರಾಜ್ಯದಲ್ಲಿ ಮಳೆಗಾಲ ಇದ್ದಾಗಲೂ ಕೆಲ ತಾಲೂಕುಗಳಲ್ಲಿ ಬರ ಪರಸ್ಥಿತಿ ಇರುತ್ತದೆ. ಉದಾಹರಣೆಗೆ ಯಾದಗಿರಿ ಜಿಲ್ಲೆಯ ಗುರಮಠಕಲ್, ಯಾದಗಿರಿ, ಸುರಪುರ ತಾಲೂಕುಗಳು ಅತೀಹೆಚ್ಚು ಬರಪೀಡಿತವಾಗಿದ್ದರೂ ಸರ್ಕಾರ ಘೋಷಣೆ ಮಾಡದೆ ಅನ್ನದಾತರಿಗೆ ಮೋಸ ಮಾಡುತ್ತಿದೆ ಎಂದು ಕಿಡಿ ಮಾರಿದರು.
2022ರಲ್ಲಿ ರಾಜ್ಯದಲ್ಲಿ ಬರಗಾಲ ಆವರಿಸಿತ್ತು. ಅಂದು ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಇದ್ದರು. ಎನ್ ಎಡಿಆರ್ ಎಫ್ ನಿಯಮಾವಳಿ 8500 ರೂ.ಸೇರಿದ ಹೆಚ್ಚುವರಿಯಾಗಿ 10 ಸಾವಿರ ಹೀಗೆ ಒಟ್ಟು 18500 ರೂ. ಪ್ರತಿ ಎಕೆರೆಗೆ ಎಂಬಂತೆ 38 ಲಕ್ಷ ರೈತರಿಗೆ ಪರಿಹಾರ ನೀಡಿದ್ದರು ಎಂದರು.



