ಗುಜರಾತ್‌ನಲ್ಲಿ ದೊಡ್ಡ ಡ್ರಗ್ಸ್‌ ಜಾಲ ಪತ್ತೆ: 2,000 ಕೋಟಿ ಮೌಲ್ಯದ ಡ್ರಗ್ಸ್​ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಗುಜರಾತ್‌ನ ವಡೋದರಾ ಮತ್ತು ಅಂಕಲೇಶ್ವರದಲ್ಲಿ ದೊಡ್ಡ ಕಾರ್ಯಾಚರಣೆ ನಡೆಸಿರುವ ಮುಂಬೈನ ಆ್ಯಂಟಿ ನಾರ್ಕೋಟಿಕ್ಸ್ ಪೊಲೀಸರ ತಂಡವು ಬರೋಬ್ಬರಿ 713 ಕೆಜಿ ಎಂಡಿಎಂಎ ಡ್ರಗ್ ವಶಪಡಿಸಿಕೊಂಡಿದೆ. ಇದರ ಮಾರುಕಟ್ಟೆ ಮೌಲ್ಯ 2000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಬರೋಡದ ಸೆಲ್ ಭರೂಚ್‌ನ ಕಾರ್ಖಾನೆಯೊಂದರಲ್ಲಿ ಅಕ್ರಮವಾಗಿ ಎಂಡಿಎಂಎ ಡ್ರಗ್ಸ್‌ ಅನ್ನು ತಯಾರಿಸಲಾಗುತ್ತಿತ್ತು. ಮೋಕ್ಸಿ ಗ್ರಾಮದ ಈ ಕಾರ್ಖಾನೆಯಿಂದ ವಶಪಡಿಸಿಕೊಂಡ 200 ಕೆಜಿ ಡ್ರಗ್ಸ್ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 1000 ಕೋಟಿ ಅಷ್ಟಾಗುತ್ತದೆ ಎಂದು ಎಟಿಎಸ್ ವರದಿ ಮಾಡಿದೆ. ವಶಪಡಿಸಿಕೊಂಡ ಡ್ರಗ್ಸ್ ಅನ್ನು ಸುಮಾರು 6 ತಿಂಗಳ ಹಿಂದೆಯೇ ಸಿದ್ಧಪಡಿಸಲಾಗಿತ್ತು ಎಂದು ಎಟಿಎಸ್ ಡಿಐಜಿ ದೀಪೇನ್ ಭದ್ರನ್ ಹೇಳಿದ್ದಾರೆ. ದೇಶದ ವಿವಿಧ ಭಾಗಗಳಿಗೆ ಸರಬರಾಜಾಗುತ್ತಿದ್ದ ಡ್ರಗ್ಸ್‌ ಅನ್ನು ಒಂದೇ ಬಾರಿಗೆ ಸಿದ್ಧಪಡಿಸಿರುವ ಎಲ್ಲ ಸಾಧ್ಯತೆಗಳಿವೆ.

 ಭರೂಚ್‌ನಿಂದ 513 ಕೆಜಿ ಡ್ರಗ್ಸ್ ವಶ
ಮುಂಬೈ ಪೊಲೀಸರ ಆ್ಯಂಟಿ ನಾರ್ಕೋಟಿಕ್ಸ್ ಸೆಲ್ ಗುಜರಾತ್‌ನ ಭರೂಚ್ ಜಿಲ್ಲೆಯ ಅಂಕಲೇಶ್ವರದಲ್ಲಿ 513 ಕೆಜಿ ಎಂಡಿ ಡ್ರಗ್ ಅನ್ನು ವಶಪಡಿಸಿಕೊಂಡಿದೆ. ಈ ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಏಳು ಮಂದಿಯನ್ನು ನಾರ್ಕೋಟಿಕ್ ಸೆಲ್ ಬಂಧಿಸಿದೆ. ವಶಪಡಿಸಿಕೊಂಡ ಮಾದಕ ದ್ರವ್ಯದ ಮೌಲ್ಯ 1260 ಕೋಟಿ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಬಂಧಿತರೆಲ್ಲರೂ ಗ್ಯಾಂಗ್‌ನ ಭಾಗವಾಗಿದ್ದಾರೆ. ಡ್ರಗ್ಸ್ ಪೂರೈಕೆ ಸರಪಳಿಯ ಬಗ್ಗೆ ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ.
 ಕೆಮಿಕಲ್ ನೆಪದಲ್ಲಿ ಡ್ರಗ್ ತಯಾರಿಸಲಾಗುತ್ತಿತ್ತು
ಗುಜರಾತ್ ಎಟಿಎಸ್‌ನ ಡಿಐಜಿ ದೀಪೇನ್ ಭದ್ರನ್ ಮಾತನಾಡಿ, ವಡೋದರದ ಸಾವ್ಲಿ ತಹಸಿಲ್ ಬಳಿ ಡ್ರಗ್‌ನ ದೊಡ್ಡ ರವಾನೆ ಜಾಲವಿದೆ ಇದೆ ಎಂಬ ರಹಸ್ಯ ಮಾಹಿತಿ ಸಿಕ್ಕಿದೆ. ಸೋಮವಾರ ಮೋಕ್ಷಿ ಗ್ರಾಮದ ಈ ಕಾರ್ಖಾನೆ ಮೇಲೆ ಎಟಿಎಸ್ ದಾಳಿ ನಡೆಸಿತ್ತು. ಅಲ್ಲಿ ಡ್ರಗ್ಸ್ ಸಂಗ್ರಹ ಪತ್ತೆಯಾಗಿದ್ದು ಮಾತ್ರವಲ್ಲದೇ ರಾಸಾಯನಿಕಗಳನ್ನು ತಯಾರಿಸುವ ನೆಪದಲ್ಲಿ ಎಂಡಿಎಂಎ ಡ್ರಗ್ಸ್ ತಯಾರಾಗುತ್ತಿದೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ತನಿಖೆಯ ನಂತರವಷ್ಟೇ ಸಂಪೂರ್ಣ ಮಾಹಿತಿ ಹೊರಬೀಳಲಿದೆ ಎಂದಿದ್ದಾರೆ.
ಮುಂಬೈ ಮತ್ತು ಗೋವಾಕ್ಕೆ ಡ್ರಗ್ಸ್ ಸರಬರಾಜಾಗುತ್ತಿತ್ತು
ಪ್ರಾಥಮಿಕ ತನಿಖೆಯಲ್ಲಿ ಗೋವಾ ಮತ್ತು ಮುಂಬೈಗೆ ಡ್ರಗ್ಸ್ ಪೂರೈಕೆಯಾಗುತ್ತಿರುವುದು ಪತ್ತೆಯಾಗಿದೆ ಎಂದು ದೀಪೇನ್ ಭದ್ರನ್ ಹೇಳಿದ್ದಾರೆ. ಇಲ್ಲಿಂದ ದೇಶದ ಇತರ ಭಾಗಗಳಿಗೂ ಡ್ರಗ್ಸ್ ರವಾನೆಯಾಗಿರುವ ಬಗ್ಗೆ ಎಟಿಎಸ್ ಶಂಕೆ ವ್ಯಕ್ತಪಡಿಸಿದೆ. ಈ ದಂಧೆಯಲ್ಲಿ ಭಾಗಿಯಾಗಿರುವವರನ್ನೂ ಪತ್ತೆ ಹಚ್ಚಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!