ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಬೈಗೆ ಹೋಗಬೇಕಿದ್ದ ವಿಮಾನವೊಂದು ಬರೋಬ್ಬರಿ 24 ಗಂಟೆಗಳ ಕಾಲ ವಿಳಂಬವಾದ ಹಿನ್ನೆಲೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಿಂದಾಗಿ ಇತರೆ ಕೆಲಸಗಳಿಗೂ ತೊಂದರೆಯಾಗಿದೆ. ದುಬೈಗೆ ತೆರಳಬೇಕಿದ್ದ ಎರಡು ಸ್ಪೈಸ್‌ಜೆಟ್ ವಿಮಾನಗಳು 24 ಗಂಟೆಗಳಷ್ಟು ವಿಳಂಬವಾಗಿವೆ. ಇದರಿಂದ ಒಟ್ಟಾರೆ 200ಕ್ಕೂ ಹೆಚ್ಚು ಪ್ರಯಾಣಿಕರು ಟರ್ಮಿನಲ್‌ನಲ್ಲಿ ಲಾಕ್ ಆಗಿದ್ದರು. ನಾಲ್ಕೈದು ಗಂಟೆಗಳು ಕಾದ ನಂತರ ಪ್ರಯಾಣಿಕರು ಗರಂ ಆಗಿದ್ದಾರೆ. ತಾಳ್ಮೆಯಿಂದ ಗಂಟೆಗಟ್ಟಲೆ ಕಾದರೂ ಫ್ಲೈಟ್ ಬಾರದೇ ಇದ್ದಾಗ ಪ್ರಯಾಣಿಕರ ತಾಳ್ಮೆಯ ಕಟ್ಟೆ ಒಡೆದಿದೆ.
ಸೋಮವಾರ ಬೆಳಗ್ಗೆ 7:45ಕ್ಕೆ ದುಬೈಗೆ ಹೊರಡಬೇಕಿದ್ದ SG 5111 ಮತ್ತು ಅದೇ ದಿನ ಸಂಜೆ 6:45ಕ್ಕೆ ಹೊರಡಬೇಕಿದ್ದ SG 5105 ವಿಮಾನಗಳು ಬರೋಬ್ಬರಿ 24 ಗಂಟೆ ವಿಳಂಬವಾಗಿದೆ. ದುಬೈಗೆ ಹೊರಟಿದ್ದ ಎಷ್ಟೋ ಮಂದಿ ಮುಖ್ಯವಾದ ಮೀಟಿಂಗ್‌ಗಳನ್ನು ಮಿಸ್ ಮಾಡಿಕೊಂಡಿದ್ದಾರೆ. ಮಕ್ಕಳು ಹಾಗೂ ವೃದ್ಧರ ಜೊತೆ ಹೊರಟಿದ್ದ ಪ್ರಯಾಣಿಕರು ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಎಷ್ಟು ಸಮಯದಿಂದ ಕಾದರೂ ಯಾಕೆ ಡಿಲೇ? ಇನ್ನೂ ಎಷ್ಟು ಸಮಯ ಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಿಲ್ಲ. ನಮಗೆ ಹತ್ತಾರು ರೀತಿಯ ಲಾಸ್ ಆಗಿದೆ ಎಂದು ಜನ ಟರ್ಮಿನಲ್‌ನ ನೆಲದ ಮೇಲೆ ಕುಳಿತು ಪ್ರತಿಭಟನೆ ಮಾಡಿದ್ದಾರೆ. ತದನಂತರ ದೆಹಲಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಪ್ರತಿನಿಧಿಗಳು ಹಾಗೂ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿದ್ದಾರೆ. ತಾತ್ಕಾಲಿಕ ವಿಶ್ರಾಂತಿ, ಊಟ ತಿಂಡಿಯ ವ್ಯವಸ್ಥೆ ಮಾಡಿದ್ದಾರೆ. ಅನಿರೀಕ್ಷಿತ ಟೆಕ್ನಿಕಲ್ ಎರರ್‌ನಿಂದ ಸಮಸ್ಯೆಯಾಗಿದೆ ಎಂದು ಕಾರಣ ಹೇಳಿದ್ದಾರೆ.



