3 ಶೇಕಡಾ ಉದ್ಯೋಗಿಗಳನ್ನು ಹೊರಹಾಕಿದ ಡಂಜೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಜಾಗತಿಕ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಕಾರ್ಪೋರೇಟ್‌ ವಲಯದಲ್ಲಿನ ಉದ್ಯೋಗ ಕಡಿತಗಳು ಮುಂದುವರೆದಿದ್ದು ಇದೀಗ ಗೂಗಲ್‌ ಬೆಂಬಲಿತ ಈ ಕಾಮರ್ಸ್ ವಿತರಣಾ ಸಂಸ್ಥೆ‌ ಡಂಜೋ (DUNZO) ತನ್ನ ಉದ್ಯೋಗಿಗಳಲ್ಲಿ 3 ಶೇಕಡಾದಷ್ಟು ಜನರನ್ನು ಕಡಿತಗೊಳಿಸುತ್ತಿರುವುದಾಗಿ ಹೇಳಿದೆ. “ಕಂಪನಿಯು ಆಂತರಿಕ ವ್ಯವಸ್ಥೆ ಹಾಗು ತನ್ನ ವ್ಯಾಪಾರ ಪ್ರಕ್ರಿಯೆಗಳನ್ನು ಮರುಹೊಂದಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನಮ್ಮ 3 ಶೇಕಡಾ ಉದ್ಯೋಗಿಗಳಿಂದ ಬೇರ್ಪಡುತ್ತಿದ್ದೇವೆ” ಎಂದು ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಕಬೀರ್ ಬಿಸ್ವಾಸ್ ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ.

ಮೂಲಗಳ ವರದಿಯ ಪ್ರಕಾರ, ಕಂಪನಿಯು ಎಷ್ಟು ಜನರನ್ನು ಬಿಡಲಾಗಿದೆ ಎಂಬುದನ್ನು ನಿರ್ದಿಷ್ಟಪಡಿಸಿಲ್ಲ, ಆದರೆ ಲಿಂಕ್ಡ್‌ಇನ್‌ನ ಡೇಟಾದ ಆಧಾರದ ಮೇಲೆ, ಡಂಜೊ 3,000 ಉದ್ಯೋಗಿಗಳನ್ನು ಹೊಂದಿದೆ. ಇದರಲ್ಲಿ ಆರಂಭಿಕವಾಗಿ 90 ಜನರನ್ನು ಹೊರಹಾಕಲಾಗಿದ್ದು ಒಟ್ಟಾರೆ 3 ಶೇಕಡಾದಷ್ಟು ಜನರು ಉದ್ಯೋಗ ವಂಚಿತರಾಗಲಿದ್ದಾರೆ. “ಸಂಖ್ಯೆಗಳು ಏನೇ ಇರಲಿ, ಇವರು ಡಂಜೊದೊಂದಿಗೆ ತಮ್ಮ ವೃತ್ತಿಜೀವನವನ್ನು ನಿರ್ಮಿಸಲು ಆಯ್ಕೆ ಮಾಡಿದ ಜನರು, ಇಂತಹ ಪ್ರತಿಭಾವಂತ ಸಹೋದ್ಯೋಗಿಗಳು ನಮ್ಮನ್ನು ತೊರೆದಿರುವುದು ದುಃಖಕರವಾಗಿದೆ, ಅವರನ್ನು ಬೆಂಬಲಿಸಲು ಕಂಪನಿಯು ನೆರವು ನೀಡುತ್ತಿದೆ” ಎಂದು ಬಿಸ್ವಾಸ್ ಹೇಳಿದ್ದಾರೆ.

ಕಂಪನಿಯ ನಷ್ಟವು 2022ನೇ ಆರ್ಥಿಕ ವರ್ಷದಲ್ಲಿ 464 ಕೋಟಿ ರೂ. ಗೆ ಏರಿಕೆಯಾಗಿದೆ. ಅಂದರೆ ಅದರ ಹಿಂದಿನ ವರ್ಷದ 229 ಕೋಟಿ ರುಪಾಯಿಗಳ ನಷ್ಟಕ್ಕಿಂತ ಎರಡು ಪಟ್ಟು ಏರಿಕೆಯಾಗಿದೆ. ಆದರೆ ಕಾರ್ಯಾಚರಣೆಯ ಆದಾಯವು 54.3 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು ಇದು 2021ನೇ ಆರ್ಥಿಕ ವರ್ಷದಲ್ಲಿ 25.1 ಕೋಟಿ ರೂಪಾಯಿಗಳಷ್ಟಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!