Monday, September 26, 2022

Latest Posts

ಕೊಡಗಿನಲ್ಲಿ ಸೆ.26ರಿಂದ ಶಾಲೆಗಳಿಗೆ ದಸರಾ ರಜೆ ಘೋಷಣೆ

ಹೊಸದಿಗಂತ ವರದಿ ಮಡಿಕೇರಿ:

ದಸರಾ ಹಿನ್ನೆಲೆಯಲ್ಲಿ ಸೆ.26ರಿಂದಲೇ ಅನ್ವಯವಾಗುವಂತೆ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಅವರು ಆದೇಶ ಹೊರಡಿಸಿದ್ದಾರೆ.

ರಾಜ್ಯಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅಕ್ಟೋಬರ್ 3ರಿಂದ ಅನ್ವಯವಾಗುವಂತೆ ಶಿಕ್ಷಣ ಇಲಾಖೆ ದಸರಾ ರಜೆ ಘೋಷಿಸಿದ್ದರೂ, ದಸರಾ ಉತ್ಸವ ಸೇರಿದಂತೆ ಆಯಾ ಜಿಲ್ಲೆಗಳ ಪರಿಸ್ಥಿತಿಗೆ ಅನುಗುಣವಾಗಿ ರಜೆ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿತ್ತು.

ಅದರಂತೆ ದಕ್ಷಿಣಕನ್ನಡ ಹಾಗೂ ಮೈಸೂರು ಜಿಲ್ಲೆಗಳಲ್ಲಿ ದಸರಾ ಹಿನ್ನೆಲೆಯಲ್ಲಿ ಸೆ.26ರಿಂದ‌ ರಜೆ ನೀಡುವಂತೆ ಸಾರ್ವಜನಿಕರಿಂದ‌ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಆ ಜಿಲ್ಲೆಗಳಲ್ಲಿ ಸೆ.26ರಿಂದ ಅ.9ರವರೆಗೆ ರಜೆ ಘೋಷಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು.
ಇದೀಗ ಕೊಡಗು ಜಿಲ್ಲೆಯಲ್ಲೂ ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ನವರಾತ್ರಿಯ ಸಂದರ್ಭ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುವುದರಿಂದ ಸೆ.26ರಿಂದ ಶಾಲೆಗಳಿಗೆ ರಜೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ದಸರಾ ಹಾಗೂ ತಲಕಾವೇರಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಒತ್ತಾಯ ಕೇಳಿಬಂದಿತ್ತು. ಅಲ್ಲದೆ ಮಡಿಕೇರಿ ದಸರಾ ಸಮಿತಿ ಕೂಡಾ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸೆ.26ರಿಂದ ಶಾಲೆಗಳಿಗೆ ರಜೆ ಘೋಷಿಸುವಂತೆ ಮನವಿ ಮಾಡಿತ್ತು.

ಇದೀಗ ಉಸ್ತುವಾರಿ ಸಚಿವರ ನಿರ್ದೇಶನದಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಅವರು ಕೊಡಗು ಜಿಲ್ಲೆಯಲ್ಲೂ ಸೆ. 26 ರಿಂದ ಅ.9 ರವರೆಗೆ ಶಾಲೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!