ಪ್ರವಾದಿ ಕುರಿತಾದ ಹೇಳಿಕೆಗೆ ದ್ವೇಷಕಾರಿದ ಒಐಸಿ: ಕುಚೇಷ್ಟೆ- ಕೋಮುವಾದ ತ್ಯಜಿಸುವಂತೆ ತಿರುಗೇಟು ನೀಡಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರವಾದಿ ಮೊಹಮ್ಮದರ ಬಗೆಗಿನ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ವಿರುದ್ಧ ದ್ವೇಷಕಾರಿಕೊಂಡಿದ್ದ ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಒಕ್ಕೂಟ (ಒಐಸಿ) ಕ್ಕೆ ಭಾರತ ಸರ್ಕಾರ ಸೋಮವಾರ ತೀಕ್ಷ್ಣ ತಿರುಗೇಟು ನೀಡಿದೆ.
ಪ್ರವಾದಿ ಮೊಹಮ್ಮದರ ವಿರುದ್ಧ ಬಿಜೆಪಿ ನಾಯಕಿ ನೂಪುರ್‌ ಶರ್ಮಾ ಹೇಳಿಕೆಯನ್ನು ಖಂಡಿಸುವ ನೆಪದಲ್ಲಿ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಯು ಭಾರತದ ವಿರುದ್ಧ ಅಸಂಬದ್ಧ ಟೀಕೆಗಳನ್ನು ಮಾಡಿತ್ತು. ʼಪ್ರವಾದಿ ಕುರಿತಾದ ಹೇಳಿಕೆ ಭಾರತದಲ್ಲಿ ಇಸ್ಲಾಂ ಧರ್ಮದ ವಿರುದ್ಧ ದ್ವೇಷ ಮತ್ತು ನಿಂದನೆಯನ್ನು ತೀವ್ರಗೊಳಿಸುವ ಹಾಗೂ ಮುಸ್ಲಿಮರ ಧಾರ್ಮಿಕ ನಂಬಿಕೆ, ಆಚರಣೆಗಳ ವಿರುದ್ಧವಾಗಿ ನಡೆಸುತ್ತಿರುವ ವ್ಯವಸ್ಥಿತ ಕಾರ್ಯತಂತ್ರ’. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ವ್ಯವಸ್ಥಿತವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಒಐಸಿ ಆರೋಪಿಸಿತ್ತು.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್‌ ಬಾಗ್ಚಿ,  ‘ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ಹೇಳಿಕೆಗಳಿಗೆ ಪ್ರತ್ಯುತ್ತರ ನೀಡಿದ್ದಾರೆ. ಒಐಸಿ ಹೇಳಿಕೆಗಳನ್ನು ಗಮನಿಸಿದ್ದೇವೆ. ಇಂತಹ ಅನಗತ್ಯ ಮತ್ತು ಸಂಕುಚಿತ ಮನೋಭಾವದ ಹೇಳಿಕೆಗಳನ್ನು ಭಾರತ ಸರ್ಕಾರವು ಸ್ಪಷ್ಟವಾಗಿ ತಿರಸ್ಕರಿಸುತ್ತದೆ.
ಒಐಸಿ ಮತ್ತೊಮ್ಮೆ ಪೂರ್ವಗ್ರಹ ಪೀಡಿತ, ದಾರಿತಪ್ಪಿಸುವ, ಕುಚೇಷ್ಟೆಯ ಹೇಳಿಕೆ ನೀಡಿರುವುದು ಖಂಡನೀಯ. ಇದು ಪಟ್ಟಭದ್ರ ಹಿತಾಸಕ್ತಿಗಳು ಧರ್ಮವನ್ನು ಆಧರಿಸಿ ನಡೆಸುತ್ತಿರುವ ವಿಭಜಕ ಕಾರ್ಯಸೂಚಿಯನ್ನು ಬಹಿರಂಗಪಡಿಸುತ್ತಿದೆ. ಒಐಸಿ ತನ್ನ ಕೋಮುವಾದಿ ಧೋರಣೆಯನ್ನು ನಿಲ್ಲಿಸಬೇಕು, ಎಲ್ಲಾ ನಂಬಿಕೆ ಮತ್ತು ಧರ್ಮಗಳಿಗೆ ಗೌರವ ತೋರಿಸಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಸೂಕ್ಷ್ಮವಾಗಿ ಎದುರೇಟು ನೀಡಿದ್ದಾರೆ.
ಭಾರತ ಸರ್ಕಾರವು ಎಲ್ಲಾ ಧರ್ಮಗಳ ಕುರಿತಾಗಿ ಅಪಾರ ಗೌರವ ಹೊಂದಿದೆ. ನಾವು ಯಾರಿಂದಲೂ ಪಾಠ ಹೇಳಿಸಿಕೊಳ್ಳಬೇಕಾಗಿಲ್ಲ. ಧಾರ್ಮಿಕ ಮುಖಂಡರನ್ನು ನಿಂದಿಸುವಂಥ ಆಕ್ಷೇಪಾರ್ಹ ಟ್ವೀಟ್‌ಗಳು ಮತ್ತು ಹೇಳಿಕೆಗಳನ್ನು ನೀಡಿದ ವ್ಯಕ್ತಿಗಳ ವಿರುದ್ಧ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅವರ ಹೇಳಿಕೆ ಯಾವುದೇ ರೀತಿಯಲ್ಲೂ ಭಾರತ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸ್ಪಷ್ಟವಾಗಿ ನುಡಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!