ಮತ್ತೆ ಉಲ್ಭಣಿಸಿದ ಎಬೋಲಾ: ಉಗಾಂಡಾದಲ್ಲಿ 11 ಪ್ರಕರಣಗಳು ಪತ್ತೆ, ಮೂವರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪೂರ್ವ  ಆಫ್ರಿಕಾ ರಾಷ್ಟ್ರ ಉಗಾಂಡಾದಲ್ಲಿ ಎಬೋಲಾ ವೈರಸ್‌ ಉಲ್ಭಣಿಸಿದ್ದು, ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ 11 ಕ್ಕೆ ಏರಿದೆ ಮತ್ತು ಜೊತೆಗೆ ಈ ಮಾರಣಾಂತಿಕ ರೋಗದಿಂದ ಕಳೆದ ಒಂದು ದಿನದಿಂಚೀಚೆಗೆ ಮೂರು ಸಾವುಗಳು ದಾಖಲಾಗಿವೆ.
ಕಳೆದ 24 ಗಂಟೆಗಳಲ್ಲಿ ಇನ್ನೂ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ದೃಢಪಟ್ಟ ಎಬೋಲಾ ಪ್ರಕರಣಗಳ ಸಂಖ್ಯೆ 11 ಕ್ಕೆ ಏರಿಕೆ ಕಂಡಿದೆ ಎಂದು ಉಗಾಂಡಾ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಜೊತೆಗೆ 19 ಶಂಕಿತ ಪ್ರಕರಣಗಳಿಗಳು ದಾಖಲಾಗಿದ್ದು ತೀವ್ರ ನಿಗಾ ವಹಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಸಚಿವಾಲಯದ ಪ್ರಕಾರ,  ಸೋಂಕಿತರ ಒಟ್ಟು 58 ಸಂಪರ್ಕಗಳನ್ನು ಪಟ್ಟಿ ಮಾಡಲಾಗಿದೆ. ಉಗಾಂಡಾದ ವಿಜ್ಞಾನಿಗಳು ಪ್ರಸ್ತುತ ಏಕಾಏಕಿ ಕಾಣಿಸಿಕೊಂಡಿರುವ ರೋಗದ ಮೂಲವನ್ನು ಇನ್ನೂ ತನಿಖೆ ಮಾಡುತ್ತಿದ್ದಾರೆ.  ಈಗ ಕಾಣಿಸಿಕೊಂಡಿರುವ ಎಬೋಲಾ ಪ್ರಬೇಧವನ್ನು ಸುಡಾನ್ ಸ್ಟ್ರೈನ್ ಎಂದು ಗುರುತಿಸಲಾಗಿದ್ದು ಈ ಪ್ರಬೇಧಕ್ಕೆ ಯಾವುದೇ ಲಸಿಕೆ ಇಲ್ಲ ಎಂದು ಎಚ್ಚರಿಸಿದ್ದಾರೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಕ್ರಮಗಳಲ್ಲಿ ಒಂದಾಗಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಕೈ ತೊಳೆದು ವ್ಯವಹರಿಸುವಂತೆ ಅವರು ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ.
ಉಗಾಂಡಾದ ನೆರೆಹೊರೆಯ ರಾಷ್ಟ್ರಗಳಾದ ದಕ್ಷಿಣ ಸುಡಾನ್, ಕೀನ್ಯಾ ಮತ್ತು ತಾಂಜಾನಿಯಾ ದೇಶಗಳಲ್ಲಿ ಎಬೋಲಾ ಎಚ್ಚರಿಕೆಗಳನ್ನು ನೀಡಿದ್ದು, ತಮ್ಮ ನಾಗರಿಕರು ಜಾಗರೂಕರಾಗಿರಲು ಮತ್ತು ಯಾವುದೇ ಶಂಕಿತ ಪ್ರಕರಣಗಳನ್ನು ವರದಿ ಮಾಡಲು ಸೂಚಿಸಿವೆ. ಎಬೋಲಾ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ಜ್ವರ, ವಾಂತಿ, ಅತಿಸಾರ, ಸಾಮಾನ್ಯ ನೋವು ಅಥವಾ ಅಸ್ವಸ್ಥತೆ, ಮತ್ತು ಅನೇಕ ಸಂದರ್ಭಗಳಲ್ಲಿ ಆಂತರಿಕ ಮತ್ತು ಬಾಹ್ಯ ರಕ್ತಸ್ರಾವ ಸೇರಿದಂತೆ ಹಲವಾರು ರೋಗಲಕ್ಷಣಗಳನ್ನು ಉಂಟುಮಾಡುತ್ತದೆ.
WHO ಪ್ರಕಾರ ಎಬೋಲಾ ಜ್ವರದಲ್ಲಿ ಮರಣ ಪ್ರಮಾಣಗಳು ಅತ್ಯಂತ ಹೆಚ್ಚು. ವರದಿಯಾದ ಪ್ರಕರಣದ ಸಾವಿನ ಪ್ರಮಾಣವು 50 ಪ್ರತಿಶತದಿಂದ 89 ಪ್ರತಿಶತದವರೆಗೆ ಇರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!