ರಷ್ಯಾ ವಿರುದ್ಧ ಪಾಶ್ಚಾತ್ಯರ ಆರ್ಥಿಕ ದಿಗ್ಬಂಧನ ಭಾರತಕ್ಕೇನು ಮಾಡಲಿದೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಪಾಶ್ಚಾತ್ಯ ರಾಷ್ಟ್ರಗಳು ರಷ್ಯ ಮೇಲೆ ಹೇರಿರುವ ಆರ್ಥಿಕ ದಿಗ್ಬಂಧನ, ಬ್ಯಾಂಕಿಂಗ್ ನಿಯಂತ್ರಣಗಳು ಭಾರತವನ್ನೆಷ್ಟು ಬಾಧಿಸಲಿವೆ? ರಷ್ಯದ ಜತೆಗಿನ ದ್ವಿಪಕ್ಷೀಯ ವ್ಯವಹಾರವನ್ನು ಯಾವ ರಾಷ್ಟ್ರವೂ ತಡೆಯುವಂತಿಲ್ಲವಾದರೂ ಅಂತಾರಾಷ್ಟ್ರೀಯಮಟ್ಟದ ಹಣಕಾಸು ನಿರ್ಬಂಧಗಳು ಭಾರತ ಮತ್ತು ರಷ್ಯಗಳ ನಡುವಿನ ವಿನಿಮಯಕ್ಕೆ ಎಷ್ಟರಮಟ್ಟಿಗೆ ತಡೆ ಒಡ್ಡಲಿವೆ ಎಂಬ ಪ್ರಶ್ನೆಯಂತೂ ಇದ್ದೇ ಇದೆ.

ರುಪಾಯಿ-ರುಬೆಲ್ ಸಹಕಾರ

ತಕ್ಷಣಕ್ಕೆ ಪಾಶ್ಚಾತ್ಯ ನಿರ್ಬಂಧಗಳನ್ನು ತಾಳಿಕೊಳ್ಳುವ ಕ್ಷಮತೆ ರಷ್ಯ ಮತ್ತು ಭಾರತದ ಆರ್ಥಿಕ ರೂಪುರೇಷೆಯಲ್ಲಿದೆ. ಏಕೆಂದರೆ ಈ ಹಿಂದೆಯೂ ಪಾಶ್ಚಾತ್ಯ ಜಗತ್ತು ರಷ್ಯದ ಮೇಲೆ ನಿರ್ಬಂಧಗಳನ್ನು ಹೇರಿದ್ದಾಗ, ರುಪಾಯಿ-ರುಬೆಲ್ ವಿನಿಮಯಕ್ಕೆ ಸೀಮಿತವಾಗಿರಿಸಿ ಡಾಲರ್ ಆಚೆಗೆ ವ್ಯವಹಾರ ಮಾಡುವ ಮಾರ್ಗವೊಂದನ್ನು ಉಭಯ ದೇಶಗಳು ಬೆಳೆಸಿಕೊಂಡಿದ್ದವು. ಅಲ್ಲದೇ, ಪರಸ್ಪರರ ನೆಲದಲ್ಲಿ ಬ್ಯಾಂಕುಗಳಿಗೂ ಅವಕಾಶ ಕೊಟ್ಟಿರುವುದರಿಂದ ಮತ್ಯಾವುದೋ ಪಾಶ್ಚಾತ್ಯ ಬ್ಯಾಂಕಿನ ಮುಖೇನ ಫಂಡ್ ವರ್ಗಾಯಿಸಬೇಕಾದ ಪ್ರಮೇಯವೂ ಇಲ್ಲ.

ಆದರೆ, ಇವೆಲ್ಲ ತಾತ್ಕಾಲಿಕ ಕ್ರಮವಾಗಿ ಸರಿ ಅಷ್ಟೆ. ಜಗತ್ತಿನ ಅರ್ಥವ್ಯವಸ್ಥೆ ಡಾಲರಿನ ಮಾನದಂಡದಲ್ಲಿರುವಾಗ ಯಾವುದೇ ಎರಡು ರಾಷ್ಟ್ರಗಳು ತಮ್ಮ ಕರೆನ್ಸಿಯಲ್ಲಿ ವ್ಯವಹಾರ ಮಾಡುವುದು ಆ ಕ್ಷಣದ ಸಂಕಷ್ಟ ನಿಭಾವಣೆಗಷ್ಟೇ ಸರಿ ಹೊರತು ದೊಡ್ಡಮಟ್ಟದ ಆರ್ಥಿಕತೆ ಬೆಳೆಸಲಾಗುವುದಿಲ್ಲ.

ನಿರ್ಬಂಧ ನಿಭಾವಣೆ- ಈ ಮೊದಲಿನ ಉದಾಹರಣೆಗಳು

ರಷ್ಯಾ 2014 ರಲ್ಲಿ ಕ್ರಿಮಿಯಾ ಭೂ ಪ್ರದೇಶದ ಮೇಲೆ ದಾಳಿ ನಡೆಸಿ ಸ್ವಾಧೀನಪಡಿಸಿಕೊಂಡಿತ್ತು. ಆ ಸಂದರ್ಭದಲ್ಲಿಯೂ ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದವು. ಆಗ ಪ್ರಪಂಚದ ಇತರ ದೇಶಗಳು ರಷ್ಯಾದೊಂದಿಗೆ ತಮ್ಮ ವ್ಯಾಪಾರ, ವಹಿವಾಟುಗಳನ್ನು ಸೀಮಿತಗೊಳಿಸಿದ್ದವು. 2019 ರಲ್ಲಿ ಭಾರತವು ರಷ್ಯಾದಿಂದ ತಾನು ಅಮದು ಮಾಡಿಕೊಳ್ಳುವ ವಸ್ತುಗಳ ಹಣ ಪಾವತಿ ವ್ಯವಸ್ಥೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಚೆನ್ನೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಇಂಡಿಯನ್ ಬ್ಯಾಂಕ್ ಗೆ ವಹಿಸಿತ್ತು. ಈ ಬ್ಯಾಂಕ್‌ ರಷ್ಯಾದ ವಿಬಿ ಬ್ಯಾಂಕ್‌  ಒಗ್ಗೂಡಿ ವ್ಯವಹರಿಸುವ ಮೂಲಕ ವಿದೇಶಿ ವ್ಯವಹಾರಗಳಿಗೆ ಅಮೆರಿಕದ ಡಾಲರ್‌ ಮೇಲಿನ ಅವಲಂಬನೆಯನ್ನು ತಪ್ಪಿಸುವ ಗುರಿಯನ್ನು ಹೊಂದಲಾಗಿತ್ತು.  ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಈ ಬ್ಯಾಂಕುಗಳು ಒಗ್ಗೂಡಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.

ಪರಮಾಣು ಕಾರ್ಯಕ್ರಮ ನಡೆಸಿದ ಕಾರಣ 2012 ರಲ್ಲಿ ಇರಾನ್ ಮೇಲೆ ಪಾಶ್ಚಿಮಾತ್ಯ ರಾಷ್ಟಗಳು ನಿರ್ಬಂಧ ಹೇರಿದ್ದವು. ಆ ಸಂದದರ್ಭದಲ್ಲಿ ಭಾರತವು ಇರಾನಿಗೆ ತೈಲ ಹಣ ಪಾವತಿಸಲು ಕೋಲ್ಕತ್ತಾ ಮೂಲದ ಯುಕೊ ಬ್ಯಾಂಕ್ ಅನ್ನು ಗೊತ್ತುಪಡಿಸಿತ್ತು.  ಆ ಬ್ಯಾಂಕ್‌ ಯುರೋಗಳಲ್ಲಿ ಠೇವಣಿಗಳನ್ನು ನಿರ್ವಹಿಸುತ್ತದೆ. ಆ ಮೂಲಕ ಹಣದ ವಹಿವಾಟು ಅಮೇರಿಕಾ ಬ್ಯಾಂಕಿಂಗ್ ವ್ಯವಸ್ಥೆಯನ್ನು ಆಧರಿಸಿ ನಡೆಯುವುದನ್ನು ತಪ್ಪಿಸುತ್ತದೆ.

ರಷ್ಯ-ಭಾರತ ವ್ಯಾಪಾರ ಪ್ರಮಾಣ

ವಾಣಿಜ್ಯ ಸಚಿವಾಲಯದ ಪ್ರಕಾರ, 2020-21 ರ ಅವಧಿಯಲ್ಲಿ ರಷ್ಯಾದೊಂದಿಗೆ ಭಾರತವು 8.1 ಬಿಲಿಯನ್ ಡಾಲರ್‌ ನಷ್ಟು ದ್ವಿಪಕ್ಷೀಯ ವ್ಯಾಪಾರ ನಡೆಸಿದೆ. ಭಾರತವು ಒಟ್ಟು 2.6 ಬಿಲಿಯನ್ ಡಾಲರ್‌ ರಫ್ತು ಮಾಡಿದ್ದರೆ, ಆಮದು ಪ್ರಮಾಣ 5.5 ಬಿಲಿಯನ್ ಡಾಲರ್‌ ನಷ್ಟಿದೆ.

ಭಾರತವು ವಿದ್ಯುತ್ ಯಂತ್ರೋಪಕರಣಗಳು, ಔಷಧಗಳು, ಸಾವಯವ ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕು, ಉಡುಪು, ಚಹಾ, ಕಾಫಿ ಮತ್ತು ವಾಹನದ ಬಿಡಿಭಾಗಗಳನ್ನು ರಷ್ಯಾಕ್ಕೆ ರಫ್ತು ಮಾಡುತ್ತಿದೆ. ಪ್ರತಿಯಾಗಿ ರಾಷ್ಯವು ರಕ್ಷಣಾ ಸಾಧನಗಳು, ಖನಿಜ ಸಂಪನ್ಮೂಲಗಳು, ಅಮೂಲ್ಯ ಕಲ್ಲುಗಳು ಮತ್ತು ಲೋಹಗಳು, ಪರಮಾಣು ಶಕ್ತಿ ಉಪಕರಣಗಳು, ರಸಗೊಬ್ಬರ, ವಿದ್ಯುತ್ ಯಂತ್ರೋಪಕರಣಗಳು, ಉಕ್ಕು ಮತ್ತು ಅಜೈವಿಕ ರಾಸಾಯನಿಕ ವಸ್ತುಗಳನ್ನು ಭಾರತಕ್ಕೆ ರಫ್ತು ಮಾಡುತ್ತಿದೆ.

ತೊಂದರೆ ಎಲ್ಲಿ ಆದೀತು?

ರಷ್ಯ-ಉಕ್ರೇನ್ ಸಂಘರ್ಷದಿಂದ ಕಚ್ಚಾತೈಲ ಬೆಲೆಯಲ್ಲಿ ಏರಿಕೆಯಾಗುವ ಭವಿಷ್ಯ ಯಾರೂ ಹೇಳಬಹುದು. ಆದರೆ ಭಾರತಕ್ಕಿರುವ ತಲೆಬಿಸಿ ರಸಗೊಬ್ಬರದ್ದು.

ತನ್ನ ಅಗತ್ಯದ ಅರ್ಧದಷ್ಟು ರಸಗೊಬ್ಬರವನ್ನು ಭಾರತ ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ರಷ್ಯ ಮತ್ತು ಉಕ್ರೇನ್ ಎರಡೂ ಸಹ ಜಗತ್ತಿಗೆ ರಸಗೊಬ್ಬರ ಪೂರೈಸೋ ಪ್ರಮುಖ ದೇಶಗಳು. ಯುದ್ಧದ ಬಿಸಿಗೆ ಇವೆರಡೂ ದೇಶಗಳ ಮಾರುಕಟ್ಟೆ ಮುಚ್ಚಿದಾಗ ಸಹಜವಾಗಿಯೇ ಜಾಗತಿಕವಾಗಿ ರಸಗೊಬ್ಬರಗಳ ಬೆಲೆ ಏರುತ್ತದೆ. ಅದಾಗಲೇ ರಸಗೊಬ್ಬರಕ್ಕೆ ಎಂದು ಬೃಹತ್ ಸಬ್ಸಿಡಿ ವ್ಯಯಿಸುತ್ತಿರುವ ಭಾರತಕ್ಕೆ ಇದು ತುಂಬ ದೊಡ್ಡ ಹೊಡೆತ.

ಇನ್ನುಳಿದಂತೆ, ರಷ್ಯದೊಂದಿಗೆ ಪೂರ್ವನಿರ್ಧರಿತವಾಗಿರುವ ರಕ್ಷಣಾ ಒಪ್ಪಂದಗಳಿಗೆಲ್ಲ ಅಮೆರಿಕ ನಿರ್ಬಂಧ ವಿಧಿಸಲಿದೆ ಎಂಬುದು ಮಾಧ್ಯಮದ ಒಂದು ವರ್ಗ ಊಹಾತ್ಮಕವಾಗಿ ಸುತ್ತುತ್ತಿರುವ ವರದಿ. ಏಕೆಂದರೆ, ಅಮೆರಿಕ ವಿದೇಶ ಆಡಳಿತದ ವಕ್ತಾರರೇ ಅಧಿಕೃತವಾಗಿ, “ರಷ್ಯ ಜತೆ ಭಾರತಕ್ಕಿರುವ ಹಳೆಯ ಸ್ನೇಹ ಹಾಗೂ ಅವರ ನಿಲುವುಗಳು ನಮಗೆ ಅರ್ಥವಾಗುತ್ತದೆ” ಎಂದಿರುವುದು ಗಮನಾರ್ಹ. ಅಲ್ಲದೇ, ಭಾರತವನ್ನು ಈ ವಿಚಾರದಲ್ಲಿ ತೀರ ಸಂಕಷ್ಟಕ್ಕೆ ಸಿಲುಕುವುದಕ್ಕೆ ಹೋದರೆ ಸಮುದ್ರಮಾರ್ಗದಲ್ಲಿ ಸುರಕ್ಷತಾ ಕಾರ್ಯತಂತ್ರ ಹೆಣೆಯುತ್ತಿರುವ ಕ್ವಾಡ್ ಸೇರಿದಂತೆ ಹಲವು ಉಪಕ್ರಮಗಳಿಗೆ ಹಿನ್ನಡೆಯಾಗುವುದನ್ನು ಪಾಶ್ಚಾತ್ಯ ಜಗತ್ತು ಅರಿತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!