ಮಂಗಳೂರು ಯುನೈಟೆಡ್ ಗೆ “ಸಮರ್ಥ” ಜಯ

ಹೊಸದಿಗಂತ ವರದಿ ಮೈಸೂರು:
ನಾಯಕ ಸಮರ್ಥ ಆರ್. ಅವರ ಆಕರ್ಷಕ ಅರ್ಧ ಶತಕ (57*) ಹಾಗೂ ಎಚ್.ಎಸ್. ಶರತ್ ಮತ್ತು ವೈಶಾಖ್ ವಿಜಯ್ ಕುಮಾರ್ ಅವರ ಶಿಸ್ತಿನ ಬೌಲಿಂಗ್ ನೆರವಿನಿಂದ ಮಂಗಳೂರು ಯುನೈಟೆಡ್ ತಂಡ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 8 ವಿಕೆಟ್ಗಳ ಜಯ ಗಳಿಸಿ ಶುಭಾರಂಭ ಕಂಡಿದೆ.
ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಮಂಗಳೂರು ಯುನೈಟೆಡ್ ಶಿಸ್ತಿನ ಬೌಲಿಂಗ್ ಪ್ರದರ್ಶಿಸಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು 119 ರನ್ಗೆ ನಿಯಂತ್ರಿಸಿತು. ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಮಂಗಳೂರಿಗೆ 18 ಓವರ್ಗಳಲ್ಲಿ 112 ರನ್ ಜಯದ ಗುರಿ ನೀಡಲಾಯಿತು. ನಾಯಕನ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಸಮರ್ಥ್, 41 ಎಸೆತಗಳನ್ನೆದುರಿಸಿ 6 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ ಅಮೂಲ್ಯ 57 ರನ್ ಗಳಿಸಿ ಇನ್ನೂ 2 ಓವರ್ ಬಾಕಿ ಇರುವಾಗಲೇ ಜಯ ತಂದಿತ್ತರು. ನಿರೀಕ್ಷೆಯಂತೆ ಸಮರ್ಥ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಮಂಗಳೂರು ಯುನೈಟೆಡ್ ಪರ ಅಭಿನವ್ ಮನೋಹರ್ ಅಜೇಯ 25 ರನ್ ಸಿಡಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಇನ್ನಿಂಗ್ಸ್ನಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಸೇರಿತ್ತು. ಇದಕ್ಕೂ ಮುನ್ನ ನಿಕಿನ್ ಜೋಶ್ 23 ರನ್ ಗಳಿಸಿ ಜಯದ ಹಾದಿ ಸುಗಮಗೊಳಿಸಿದ್ದರು.

ಮಂಗಳೂರು ಉತ್ತಮ ಆರಂಭ:
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಮಂಗಳೂರು ಯುನೈಟೆಡ್ ಉತ್ತಮ ಆರಂಭ ಕಂಡಿತ್ತು. ಹುಬ್ಬಳ್ಳಿಯ ಆರಂಭಿಕ ಆಟಗಾರರಾದ ಜಿ. ನವೀನ್ (1) ಮತ್ತು ಲವ್ನೀತ್ ಸಿಸೋಡಿಯಾ (7) ಬೇಗನೇ ವಿಕೆಟ್ ಕಳೆದುಕೊಂಡರು. ಯುವ ವೇಗಿ ವೈಶಾಖ್ ವಿಜಯ್ ಕುಮಾರ್ ಮೊದಲ ಓವರ್ನಲ್ಲೇ ನವೀನ್ಗೆ ಪೆವಿಲಿಯನ್ ಹಾದಿ ತೋರಿಸಿದರೆ, ಅನುಭವಿ ಬೌಲರ್ ಎಚ್.ಎಸ್. ಶರತ್ ತಮ್ಮ ಎರಡನೇ ಓವರ್ನ ಮೊದಲ ಎಸೆತದಲ್ಲಿ ಸಿಸೋಡಿಯಾ ಅವರ ವಿಕೆಟ್ ಕಬಳಿಸಿದರು. ಇದರೊಂದಿಗೆ 9 ರನ್ ಗಳಿಸುತ್ತಲೇ ಹುಬ್ಬಳ್ಳಿ ತನ್ನ ಅಮೂಲ್ಯ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಿಯು ಶಿವಕುಮಾರ್ ಕೂಡ ಹೆಚ್ಚು ಕಾಲ ಕ್ರೀಸಿನಲ್ಲಿ ಉಳಿಯದೆ ಕೇವಲ 7 ರನ್ ಗಳಿಸಿ ರೋಹಿತ್ ಕುಮಾರ್ ಸ್ಪಿನ್ ಬೌಲಿಂಗ್ನಲ್ಲಿ ನೊರೊನ್ಹಾಗೆ ಕ್ಯಾಚಿತ್ತು ನಿರ್ಗಮಿಸಿದರು.
ನಂತರ ಲಿಯಾನ್ ಖಾನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ತಂಡ ಚೇತರಿಸಿಕೊಳ್ಳುವಂತೆ ಮಾಡಿದರು. 25 ಎಸೆತಗಳನ್ನೆದುರಿಸಿದ ಲಿಯಾನ್ ಖಾನ್ 3 ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ 34 ರನ್ ಗಳಿಸುವುದರೊಂದಿಗೆ ಹುಬ್ಬಳ್ಳಿ ಟೈಗರ್ಸ್ 10 ಓವರ್ಗಳಲ್ಲಿ 11 ಓವರ್ಗಳಲ್ಲಿ 69 ರನ್ ಗಳಿಸಿತು. ಅನುಭವಿ ಬೌಲರ್ ಅಮಿತ್ ವರ್ಮಾ ಉತ್ತಮ ಜೊತೆಯಾಟವನ್ನು ಮುರಿಯಲ್ಲಿ ಯಶಸ್ವಿಯಾದರು. ತುಷಾರ್ ಸಿಂಗ್ ಆ ನಂತರ ಅಬ್ಬರದ ಆಟಕ್ಕೆ ಮನ ಮಾಡಿ ಎರಡು ಸಿಕ್ಸರ್ಗಳನ್ನು ಸಿಡಿಸಿದರು. ಆದರೆ 34 ರನ್ ಗಳಿಸುತ್ತಲೇ ಶರತ್ ಅವರ ಎರಡನೇ ಬಲಿಯಾಗಿ ಪೆವಿಲಿಯನ್ ಸೇರಿದರು. ಕೊನೆಯ ಓವರ್ಗಳಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತಕ್ಕೆ ನೆರವಾಗಬೇಕೆಂದು ಅಂಗಣಕ್ಕಿಳಿದ ಹುಬ್ಬಳ್ಳಿ ಟೈಗರ್ಸ್ ತಂಡದ ನಾಯಕ ಅಭಿಮನ್ಯು ಮಿಥುನ್ ಅವರ ಯೋಜನೆ ಈಡೇರಲಿಲ್ಲ. ಕೇವಲ 2 ರನ್ ಗಳಿಸಿ ಪೆವಿಲಿಯನ್ ಸೇರಬೇಕಾಯಿತು. ಭರವಸೆಯ ಆಟಗಾರ ಶಿಶಿರ್ ಭವಾನೆ ರನೌಟ್ಗೆ ಬಲಿಯಾಗುವುದರೊಂದಿಗೆ ಹುಬ್ಬಳ್ಳಿ ಟೈಗರ್ಸ್ನ ಬೃಹತ್ ಮೊತ್ತದ ಕನಸು ಸಾಕಾರಗೊಳ್ಳಲಿಲ್ಲ. ಅಂತಿಮವಾಗಿ ಹುಬ್ಬಳ್ಳಿ ಟೈಗರ್ಸ್ 9 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತು.
ಮಂಗಳೂರು ಯುನೈಟೆಡ್ನ ಬೌಲರ್ಗಳು ಉತ್ತಮ ಬೌಲಿಂಗ್ ಪ್ರದರ್ಶಿಸಿ ಹುಬ್ಬಳ್ಳಿಯನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಎಚ್.ಎಸ್. ಶರತ್ (17ಕ್ಕೆ 2) ಹಾಗೂ ವೈಶಾಖ್ ವಿಜಯ್ ಕುಮಾರ್ (23ಕ್ಕೆ 2) ಆರಂಭದಲ್ಲೇ ಹುಬ್ಬಳ್ಳಿ ತಂಡಕ್ಕೆ ಆಘಾತ ನೀಡಿದರು. ನಂತರ ವೆಂಕಟೇಶ್, ರೋಹಿತ್ ಹಾಗೂ ಅಮಿತ್ ವರ್ಮಾ ತಲಾ 1 ವಿಕೆಟ್ ಗಳಿಸಿ ಹುಬ್ಬಳ್ಳಿಯ ರನ್ ಗಳಿಕೆಗೆ ಕಡಿವಾಣ ಹಾಕಿದರು. ಉತ್ತಮ ಫೀಲ್ಡಿಂಗ್ ಪ್ರದರ್ಶಿಸಿದ ಮಂಗಳೂರು ಯುನೈಟೆಡ್ ಎರಡು ರನೌಟ್ಗಳ ಮೂಲಕ ಹುಬ್ಬಳ್ಳಿಯನ್ನು ನಿಯಂತ್ರಿಸಿತು.
ಇದಕ್ಕೂ ಮುನ್ನ ನೆಡೆದ ಉದ್ಘಾಟನಾ ಸಮಾರಂಭದಲ್ಲಿ ಮೈಸೂರಿನ ಮಹಾರಾಣಿ ಪ್ರಮೋದಾ ದೇವಿಯವರು ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಸಂತೋಷ್ ಮೆನನ್, ಖಜಾಂಚಿ ವಿನಯ್ ಮೃತ್ಯುಂಜಯ ಹಾಜರಿದ್ದರು.

ಸಂಕ್ಷಿಪ್ತ ಸ್ಕೋರ್:
ಹುಬ್ಬಳ್ಳಿ ಟೈಗರ್ಸ್: 20 ಓವರ್ಗಳಲ್ಲಿ ವಿಕೆಟ್ಗೆ 119, (ಲಿಯಾನ್ ಖಾನ್ 34, ತುಷಾರ್ ಸಿಂಗ್ 34, ಶರತ್ 17ಕ್ಕೆ 2, ವೈಶಾಖ್ 23ಕ್ಕೆ 2)
ಮಂಗಳೂರು ಯುನೈಟೆಡ್:16 ಓವರ್ಗಳಲ್ಲಿ 2 ವಿಕೆಟ್ಗೆ 114 (ಸಮರ್ಥ್ ಆರ್ 57* ಅಭಿನವ್ ಮನೋಹರ್ 25* ನಿಕಿನ್ ಜೋಸ್ 23, ಅಭಿಮನ್ಯು ಮಿಥುನ್ 20ಕ್ಕೆ 1, ಜಹೂರ್ ಫಾರೂಖಿ 24ಕ್ಕೆ 1)
(ಮಳೆಯಿಂದಾಗಿ ಮಂಗಳೂರು ಯುನೈಟೆಡ್ಗೆ 18 ಓವರ್ಗಳಲ್ಲಿ 112 ರನ್ ಗುರಿ ನೀಡಲಾಗಿತ್ತು)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!