ದಿಗಂತ ವರದಿ ಶಿವಮೊಗ್ಗ :
ಪ್ರತೀ ಬೂತ್ ನಲ್ಲೂ ಹಿಂದುಳಿದ ವರ್ಗದ ಸಂಘಟನೆ ಬಲಪಡಿಸಲು ಯತ್ನಿಸಲಾಗುತ್ತಿದ್ದು, ಅದಕ್ಕೆ ಎಲ್ಲರೂ ಕೈ ಜೋಡಿಸುವಂತೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದ ಶುಭ ಮಂಗಳ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ. ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ದೇಶಕ್ಕೆ ಹಿಂದುಳಿದ ವರ್ಗದವರ ಕೊಡುಗೆ ಬಹಳಷ್ಟಿದ್ದು ಯಾರೂ ಕೂಡ ಕೀಳರಿಮೆ ಬೆಳೆಸಿಕೊಳ್ಳದೆ ಪಕ್ಷ ಸಂಘಟನೆ ಮಾಡುವುದರ ಜತೆಗೆ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸುವಂತೆ ಹೇಳಿದರು.
ಸಾವಿರಾರು ಸಮಾಜ ಸುಧಾರಕರು ಹಿಂದುಳಿದವರೇ ಆಗಿದ್ದು, ಅವರ ಕಾರ್ಯವೈಖರಿಯನ್ನು ಅರಿತು ಕೆಲಸ ಮಾಡಬೇಕಿದೆ. ಅವರು ತಮ್ಮ ಜಾತಿ ಯಾವುದೆಂದು ಹೇಳದೆ ಕೆಲಸ ಮಾಡಿದ್ದಾರೆ.ಅದೇ ರೀತಿಯಲ್ಲಿ ಪ್ರತಿಯೊಬ್ಬ ಹಿಂದುಳಿದವರನ್ನು ಜೋಡಿಸುವ ಕೆಲಸ ಆಗಬೇಕಿದೆ ಎಂದರು.
ಹಿಂದುಳಿದ ವರ್ಗದವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಸೌಲಭ್ಯ ಕೊಡಿಸುವ ಕೆಲಸ ಆಗಬೇಕಿದೆ. ಮುಂದಿನ ದಿನಗಳಲ್ಲಿಹಿಂದುಳಿದ ವರ್ಗದ ಮೋರ್ಚಾವನ್ನು ಬಲಗೊಳಿಸುವಂತೆ ಕರೆ ನೀಡಿದರು.