ಈ ವಾರ ತೆರೆಗಿಲ್ಲ ಹೊಸ ಸಿನೆಮಾ: ಥಿಯೇಟರ್‌ಗೆ ಎಲೆಕ್ಷನ್ ಇಂಟರ್ ವೆಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಘಟಾನುಘಟಿ ನಾಯಕರು ಅಬ್ಬರದ ಮತ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಚುನಾವಣೆಯ ಬಿಸಿ ಚಿತ್ರರಂಗಕ್ಕೂ ತಟ್ಟಿದೆ. ಶುಕ್ರವಾರ ಬಂತೆಂದರೆ ಚಿತ್ರಮಂದಿರಗಳಿಗೆ ತೆರಳುತ್ತಿದ್ದ ಮಂದಿ ಇಂದು ಮಂಕಾಗಿ ಮನೆಯಲ್ಲೇ ಕುಳಿತಿದ್ದಾರೆ.

ಸ್ಯಾಂಡಲ್‌ವುಡ್‌ನ‌ಲ್ಲಿ ಸಿನಿಮಾಗಳ ಬಿಡುಗಡೆಯ ರಂಗು ಕಾಣುತ್ತಿಲ್ಲ. ಅದಕ್ಕೆ ಕಾರಣ ದಿನದಿಂದ ದಿನಕ್ಕೆ ಏರುತ್ತಿರುವ ವಿಧಾನಸಭಾ ಚುನಾವಣೆಯ ಕಾವು ಒಂದೆಡೆಯಾದರೆ, ಮತ್ತೂಂದೆಡೆ ಐಪಿಎಲ್‌ ಅಬ್ಬರ. ಈ ವಾರ ಕನ್ನಡ ಚಿತ್ರರಂಗದಿಂದ ಯಾವುದೇ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಆದರೆ ಮುಂದಿನ ವಾರ ಒಂದಷ್ಟು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.

ಈ ಹಿನ್ನೆಲೆಯಲ್ಲಿ ಏಪ್ರಿಲ್‌ ಕೊನೆಯ ಶುಕ್ರವಾರದಿಂದಲೇ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಬಿಡುಗಡೆಯ ಸಂಖ್ಯೆಯಲ್ಲಿ ಇಳಿಕೆಯಾಗಿವೆ. ಏಪ್ರಿಲ್‌ 28 ರಂದು (ಶುಕ್ರವಾರ) ಕನ್ನಡದಲ್ಲಿ ವಿಜಯ ರಾಘವೇಂದ್ರ ಅಭಿನಯದ “ರಾಘು’ ಮತ್ತು ಜಗ್ಗೇಶ್‌ ಅಭಿನಯದ “ರಾಘವೇಂದ್ರ ಸ್ಟೋರ್’ ಎಂಬ ಎರಡು ಸಿನಿಮಾಗಳು ಮಾತ್ರ ತೆರೆಕಂಡಿದ್ದವು. ಇನ್ನು ಸದ್ಯಕ್ಕೆ ಮೇ ತಿಂಗಳ ಮೊದಲ ಶುಕ್ರವಾರ (ಮೇ. 5) ಯಾವುದೇ ಸಿನಿಮಾಗಳು ಕೂಡ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿಲ್ಲ. ಹೀಗಾಗಿ ಈ ಶುಕ್ರವಾರ ಕನ್ನಡದಲ್ಲಿ ಯಾವುದೇ ಸಿನಿಮಾಗಳು ತೆರೆಕಂಡಿಲ್ಲ. ಈಗಾಗಲೇ ಮೇ ಮೊದಲ ವಾರ ಅಥವಾ ಎರಡನೇ ವಾರ ತೆರೆಗೆ ಬರಬೇಕು ಎಂದುಕೊಂಡಿದ್ದ ಅನೇಕ ಸಿನಿಮಾಗಳು ಮುಂದೂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!