ಕೊಡಗಿನಲ್ಲಿ ಮತ್ತೆ ಕಾಡಿದ ಕಾಡಾನೆ: ಅತ್ತೂರಿನಲ್ಲಿ ಕೃಷಿಕನ ಮೇಲೆ ದಾಳಿ

ಹೊಸದಿಗಂತ ವರದಿ ಕುಶಾಲನಗರ:

ಕೊಡಗು ಜನತೆಗೆ ಬಿಟ್ಟೂ ಬಿಡದೆ ಕಾಡುತ್ತಿವೆ ಕಾಡಾನೆಗಳು. ಬೆಳೆ ಹಾನಿ ಜೊತೆಗೆ ಜೀವ ಹಾನಿ ಕೂಡ ಎದುರಾಗಿದ್ದು, ಇದೀಗ ಹಾರಂಗಿ ಬಳಿಯ ಅತ್ತೂರು ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿ ಕೃಷಿಕರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಅತ್ತೂರು ಗ್ರಾಮದ ರೈತ ಲೋಕೇಶ್ ಎಂಬವರೇ ಗಾಯಗೊಂಡವರು. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಕಾಡಾನೆ ತೋಟಕ್ಕೆ ನುಗ್ಗಿರುವ ಬಗ್ಗೆ ನೆರೆಯ ನಿವಾಸಿ ಅಶೋಕ್ ಎಂಬವರು ಲೋಕೇಶ ಅವರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಎಚ್ಚೆತ್ತುಕೊಂಡ ಲೋಕೇಶ್, ತಾನು ಬೆಳೆದ ಗೆಣಸು ಫಸಲನ್ನು ಕಾಡಾನೆಗಳು ತಿಂದು ಹಾಗೂ ತುಳಿದು ಹಾನಿಪಡಿಸುತ್ತವೆ ಎಂಬ ಆತಂಕದಿಂದ ಕೈಯಲ್ಲಿ ಟಾರ್ಚ್ ಹಿಡಿದು ತೋಟದತ್ತ ತೆರಳಿದ್ದಾರೆ.  ಅಷ್ಟರಲ್ಲಿ ಒಂದು ಬದಿಯಲ್ಲಿ ಕಾಡಾನೆಯ ಮರಿ ಗೋಚರವಾದಾಗ ಅದರತ್ತ ಟಾರ್ಚ್ ಬಿಟ್ಟು ಓಡಿಸುವ ಯತ್ನದಲ್ಲಿದ್ದಾಗ ಮತ್ತೊಂದು ಬದಿಯಲ್ಲಿದ್ದ ಇನ್ನೊಂದು ಕಾಡಾನೆ ಹಠಾತ್ತನೆ ಲೋಕೇಶ್ ಅವರ ಮೇಲೆ ದಾಳಿ ನಡೆಸಿದೆ.‌

ಲೋಕೇಶ್ ಕಾಲಿಗೆ ಒಮ್ಮೆ ಕಾಡಾನೆ ಒದ್ದು ಬೀಳಿಸಿದ್ದಲ್ಲದೆ ಸೊಂಟದ ಭಾಗಕ್ಕೂ ತೀವ್ರ ತರಹದ ದಾಳಿ ನಡೆಸಿದ ಪರಿಣಾಮ ಅವರ ಒಂದು ಕಾಲು ಸಂಪೂರ್ಣ ಜಖಂಗೊಂಡಿದೆ. ಹಾಗೆಯೇ ಸೊಂಟದ ಭಾಗಕ್ಕೂ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದು, ಕಿಡ್ನಿಯ ಭಾಗ ಸಹ ಹಾನಿಯಾಗಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಲೋಕೇಶ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ದು ಹೆಚ್ವಿನ ಚಿಕಿತ್ಸೆಗೆ ಮೈಸೂರಿನ ಅಪೋಲೋ ದಾಖಲಿಸಿದ್ದಾರೆ. ಕಾಡಾನೆ ದಾಳಿಯ ವಿಷಯ ಅರಿತ ತಕ್ಷಣವೇ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶೀಘ್ರ ಗತಿಯಲ್ಲಿ ಸ್ಧಳಕ್ಕೆ ಬಂದು ಚಿಕಿತ್ಸೆಗೆ ಮುಂದಾದರು.

ಆದರೆ ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟುವಲ್ಲಿ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಬೇಕು. ಈಗಾಗಲೇ ತೋಟಗಾರಿಕಾ ಇಲಾಖೆಯ ಸರಹದ್ದಿನವರೆಗೆ ಆಗಿರುವ ಸೋಲಾರ್ ತಂತಿ ಬೇಲಿ ಹಾಗೂ ಕಂದಕ ನಿರ್ಮಾಣ ಕಾಮಗಾರಿಯನ್ನು ಮುಂದುವರೆಸಿ ಗ್ರಾಮ ವ್ಯಾಪ್ತಿಯ ಕೃಷಿಕರಿಗೆ ಹಾಗೂ ಸಾರ್ವಜನಿಕರಿಗೆ ಅಭಯ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!