ಕೋಲಿಂದ ಹೊಡೆದು ಕೆಣಕಿದ ಹುಡುಗನಿಗೆ ತಕ್ಕ ಶಾಸ್ತಿ ಮಾಡಿದ ಆನೆ.. ವೈರಲ್‌ ವಿಡಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಾನವ ಜನಸಂಖ್ಯೆ ಹೆಚ್ಚಾದಂತೆ ಪ್ರಾಣಿಗಳ ಆವಾಸಸ್ಥಾನಗಳು ಕಡಿಮೆಯಾಗುತ್ತ ಸಾಗುತ್ತಿದೆ. ಇತ್ತೀಚೆಗೆ ಮಾನವ-ವನ್ಯಜೀವಿ ಸಂಘರ್ಷಗಳು ವ್ಯಾಪಕವಾಗುತ್ತಿವೆ. ತಮ್ಮ ವಸತಿ ಕಳೆದುಕೊಂಡಿರುವ ಕಾಡುಪ್ರಾಣಿಗಳು ಜನ ವಸತಿ ಪ್ರದೇಶಗಳತ್ತ ಬಂದರೆ ಅವನ್ನು ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತದೆ. ಅಂತಹ ಒಂದು ಘಟನೆಯಲ್ಲಿ, ಹುಡುಗನೊಬ್ಬ ಆನೆಗಳಿಗೆ ಕೋಲಿನಿಂದ ಹೊಡೆದು ಕೆಣಕುತ್ತಿರುವ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುರೇಂದರ್ ಮೆಹ್ರಾ ಅವರು  ʼಹುಚ್ಚುತನ ಮತ್ತು ವನ್ಯಜೀವಿ ಸಂಘರ್ಷ ಎಂಬ ಶೀರ್ಷಿಕೆ ನೀಡಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಆನೆಗಳ ದೊಡ್ಡ ಹಿಂಡಿನತ್ತ ಹೋದ ಹುಡುಗ ಆನೆಯೊಂದಕ್ಕೆ ಕೋಲಿನಿಂದ ಹೊಡೆಯಲು ಪ್ರಯತ್ನಿಸುತ್ತಾನೆ. ಒಂದು ಹೊಡೆತವು ಅದರ ಮೇಲೆ ಬೀಳುತ್ತದೆ. ಪ್ರತಿಕ್ರಿಯೆಯಾಗಿ, ಕೋಪಗೊಂಡ ಆನೆಯು ಹುಡುಗನನ್ನು ಬೆನ್ನಟ್ಟುತ್ತದೆ. ಆದರೆ, ಅವರನ್ನು ಶಿಕ್ಷಿಸುವ ಅವಕಾಶವಿದ್ದರೂ ಅತನ ಮೇಲೆ ದಾಳಿ ಮಾಡಲಿಲ್ಲ. ಆ ವೇಳೆ ಯುವಕ ಮತ್ತು ಅವನ ಸ್ನೇಹಿತ ತಮ್ಮನ್ನು ರಕ್ಷಿಸಿಕೊಳ್ಳಲು ಸ್ಥಳದಿಂದ ಓಡಿಹೋಗಿದ್ದಾರೆ.
ಈ ವಿಡಿಯೋ 14,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಜನರು ಕೋಪೋದ್ರಿಕ್ತರಾಗಿ ಸಂದೇಶ ಹಂಚಿಕೊಳ್ಳುತ್ತಿದ್ದಾರೆ. ಒಬ್ಬ ಬಳಕೆದಾರರು ಈ ಕೃತ್ಯವನ್ನು “ಹುಚ್ಚುತನ” ಎಂದು ಕರೆದರೆ, “ನಾವು ಅವುಗಳಿಗೆ ಸೇರಿದ ಅರಣ್ಯವನ್ನು ಅತಿಕ್ರಮಿಸುತ್ತೇವೆ. ಈಗ ಅವುಗಳನ್ನೇ ಓಡಿಸುತ್ತಿದ್ದೇವೆ. ಈ ಬಗ್ಗೆ ಜನರಿಗೆ ತಿಳುವಳಿಕೆ ಮಾಡುವುದು ಯಾವಾಗ?” ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ”ಈ ವೀಡಿಯೊವನ್ನು ನೋಡಿದ ನಂತರ, ಆನೆಗಳು ತಮ್ಮ ಕಾಲಿನಿಂದ ಮನುಷ್ಯರನ್ನು ಪುಡಿಮಾಡುವುದು, ಮನೆಯನ್ನು ನಾಶಪಡಿಸುವುದು ಸಮರ್ಥನೀಯವಾಗಿದೆ ಎನಿಸಿತು. ಏಕೆಂದರೆ ನಾವು ಮನುಷ್ಯರು ಭೂಮಿಗೆ ಅರ್ಹರಲ್ಲ.’’ ಎಂದು ಮತ್ತೊಬ್ಬ ಬಳಕೆದಾರ ಮಾರ್ಮಿಕವಾಗಿ ಬರೆದಿದ್ದಾರೆ.
ಕಾಡುಪ್ರಾಣಿಗಳ ಮೇಲೆ ಕ್ರೌರ್ಯ ಎಸಗುವ ಇಂತಹವರನ್ನು ಬಂಧಿಸಬೇಕು ಎಂದು ಕೆಲವರು ಒತ್ತಾಯಿಸಿದರೆ, ಇನ್ನು ಬೆಳೆ ನಾಶ, ಆಸ್ತಿಪಾಸ್ತಿಗೆ ಹಾನಿ ಮಾಡುವ ಆನೆಗಳನ್ನು ಗ್ರಾಮಗಳಿಂದ ಓಡಿಸಲು ಪ್ರಾಯೋಗಿಕ ಪರಿಹಾರವನ್ನು ಅರಣ್ಯ ಇಲಾಖೆ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!