ಅಪಘಾತಕ್ಕೀಡಾದವರ ರಕ್ಷಣೆಗೆ ‘ಆಪತ್ಕಾಲಯಾನ’: 65 ನೂತನ ಅಂಬುಲೆನ್ಸ್ ಗೆ ಹಸಿರು ನಿಶಾನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ‘ಮುಖ್ಯಮಂತ್ರಿಗಳ ಆಪತ್ಕಾಲ ಯಾನ ಸೇವೆ’ಯ ಆಧುನಿಕ ಜೀವ ರಕ್ಷಕ ಸವಲತ್ತುಗಳಿರುವ 65 ಅಂಬುಲೆನ್ಸ್‌ ಗಳನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು.

ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಮ್ಮ ಸರ್ಕಾರ ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಅಪಘಾತಗಳ ಪ್ರಕರಣಗಳಲ್ಲಿ ಸಾವುಗಳನ್ನು ತಡೆಯುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನ ಹಾಕಿಕೊಳ್ಳುತ್ತಿದೆ. ಆರೋಗ್ಯ ಇಲಾಖೆಯಿಂದ ಇಂದು 65 ಅಂಬುಲೆನ್ಸ್‌ಗಳನ್ನ ಜನಸೇವೆಗಾಗಿ ಮುಡಿಪಾಗಿಟ್ಟಿದ್ದೇವೆ. ರಾಜ್ಯದಾದ್ಯಂತ ಈ ಯೋಜನೆ ವಿಸ್ತರಿಸಲು ಬೇಕಾಗುವ ಹಣಕಾಸನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸರ್ಕಾರದ ಜೊತೆ ಸಾರ್ವಜನಿಕರು ಸಹಕರಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನ ಜನರು ಪಾಲಿಸಬೇಕು. ವೇಗವಾಗಿ ಚಲಿಸಿದರೆ ಅಪಘಾತ ಆಗಲಿದೆ ಎನ್ನುವುದು ಗೊತ್ತಿದ್ದರೂ ಕೆಲವರು ವೇಗವಾಗಿ ವಾಹನ ಚಲಾಯಿಸುತ್ತಾರೆ. ಇವನ್ನೆಲ್ಲ ಬಿಡಿ ಎಂದು ನಾಡಿನ ಜನರಿಗೆ ಕಿವಿಮಾತು ಹೇಳಿದರು. ಕುಡಿದು ವಾಹನ ಚಲಾಯಿಸುವವರು, ಅತಿ ವೇಗವಾಗಿ ಚಾಲನೆ ಮಾಡುವವರ ಲೈಸೆನ್ಸ್ ರದ್ದುಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಇದೇ ವೇಳೆ ಸಾರಿಗೆ ಸಚಿವರಿಗೆ ಸೂಚನೆ ನೀಡಿದರು.

ಅಂಬುಲೆನ್ಸ್‌ಗಳು ಹೇಗೆ ಕಾರ್ಯನಿರ್ವಹಿಸಲಿವೆ?
* ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳ ಹತ್ತಿರದ ಆಸ್ಪತ್ರೆಗಳಲ್ಲಿ ಅಂಬುಲೆನ್ಸ್‌ಗಳು ತಂಗಲಿವೆ.

* 65 ಹಾಟ್‌ಸ್ಪಾಟ್‌ಗಳನ್ನ ಗುರುತಿಸಲಾಗಿದ್ದು, ಆ ಸ್ಥಳಗಳ ಹತ್ತಿರದ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳಿಗೆ ಅಂಬುಲೆನ್ಸ್‌ಗಳನ್ನು ನೀಡಲಾಗಿದೆ.

* ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಡ್ವಾನ್ಸ್ ಲೈಫ್ ಸಪೋರ್ಟ್ (ALS) ಅಂಬ್ಯುಲೆನ್ಸ್ ಸೇವೆ ಲಭ್ಯವಾಗಲಿದೆ.

* ಜಿಲ್ಲಾಸ್ಪತ್ರೆಗಳ ಮಟ್ಟದಲ್ಲಿ ಚಿಕಿತ್ಸೆ ಅಗತ್ಯವಾದಲ್ಲಿ ಆರೋಗ್ಯ ಇಲಾಖೆಯ ಸ್ಟಾಫ್ ನರ್ಸ್‌ನ್ನು ಅಂಬುಲೆನ್ಸ್‌ಗಳಿಗೆ ಡೆಪ್ಯೂಟ್ ಮಾಡಲಾಗುವುದು.

* ವೆಂಟೀಲೇಟರ್ ಸಹಾಯದೊಂದಿಗೆ ಜಿಲ್ಲಾಸ್ಪತ್ರೆಗಳಿಗೆ ರೋಗಿಗಳನ್ನ ಕರೆದೊಯ್ದು ಚಿಕಿತ್ಸೆ ಕೊಡಿಸುವ ಸೌಲಭ್ಯ ಒದಗಿಸಲಾಗಿದೆ.

* ಅಂಬುಲೆನ್ಸ್‌ಗಳು ಸುಸಜ್ಜಿತ ಉಪಕರಣಗಳು, ಔಷಧಿ ಹಾಗೂ ಉಪಭೋಗ್ಯ ವಸ್ತುಗಳನ್ನು ಹೊಂದಿರಲಿವೆ. ಈ ಪ್ರಕ್ರಿಯೆಯು ಅಪಘಾತಕ್ಕೆ ಒಳಗಾದ ವ್ಯಕ್ತಿಯ ಜೀವ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಅಲ್ಲದೇ ಸ್ಥಳಾಂತರಕ್ಕೆ ರೋಗಿಗಳ ಸ್ವಂತ ಹಣದ ವ್ಯಯವನ್ನು ತಪ್ಪಿಸಲಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!