September 27, 2026
Sunday, September 27, 2026
spot_img

ಯುದ್ಧದ ಕಾರ್ಮೋಡ ಅಂತ್ಯ: ಅಮೆರಿಕ-ಇರಾನ್ ನಡುವಿನ ಐತಿಹಾಸಿಕ ಸೌಹಾರ್ದಕ್ಕೆ ‘ನಮೋ’ ಹರುಷ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿ ದೀರ್ಘಕಾಲದಿಂದ ಉಂಟಾಗಿದ್ದ ಯುದ್ಧದ ಉದ್ವಿಗ್ನತೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಐತಿಹಾಸಿಕ ಶಾಂತಿ ಒಪ್ಪಂದವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮುಕ್ತವಾಗಿ ಸ್ವಾಗತಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿರುವ ಅವರು, ಜಾಗತಿಕ ಆರ್ಥಿಕ ಸ್ಥಿರತೆಗೆ ಈ ಒಪ್ಪಂದದ ಅಗತ್ಯತೆಯನ್ನು ಪ್ರಮುಖವಾಗಿ ಒತ್ತಿಹೇಳಿದ್ದಾರೆ.

ಪ್ರಾದೇಶಿಕ ಶಾಂತಿ ಮತ್ತು ಮುಕ್ತ ವ್ಯಾಪಾರಕ್ಕೆ ಭಾರತದ ಆಶಯ

ಈ ಯುದ್ಧವು ಜಗತ್ತಿನಾದ್ಯಂತ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಿತ್ತು ಮತ್ತು ಅಮಾಯಕರ ಪ್ರಾಣಹಾನಿಗೆ ಕಾರಣವಾಗಿತ್ತು ಎಂದು ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಹೊಸ ಒಪ್ಪಂದದ ಅನುಷ್ಠಾನವು ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆಯನ್ನು ಮರುಸ್ಥಾಪಿಸಲು ನೆರವಾಗಲಿದೆ ಎಂದಿದ್ದಾರೆ. ಜೊತೆಗೆ, ಇದು ಮುಕ್ತ ಕಡಲ ಸಂಚಾರ ಮತ್ತು ಮುಕ್ತ ಜಾಗತಿಕ ವ್ಯಾಪಾರವನ್ನು ಖಚಿತಪಡಿಸುತ್ತದೆ ಎಂದು ಭಾರತ ಆಶಿಸುವುದಾಗಿ ತಿಳಿಸಿದ್ದಾರೆ. ಉಳಿದಿರುವ ಇತರ ವಿಷಯಗಳ ಬಗ್ಗೆಯೂ ಶೀಘ್ರದಲ್ಲೇ ಮಾತುಕತೆ ನಡೆದು, ದೀರ್ಘಕಾಲೀನ ಸುಸ್ಥಿರ ಒಪ್ಪಂದ ಏರ್ಪಡಲಿ ಎಂದು ಅವರು ಆಶಿಸಿದ್ದಾರೆ.

ಟ್ರಂಪ್ ಘೋಷಣೆ: ನೌಕಾ ದಿಗ್ಬಂಧನ ತೆರವು

ಭಾರತೀಯ ಕಾಲಮಾನದ ಪ್ರಕಾರ ಇಂದು ಮುಂಜಾನೆ ಈ ರಾಜತಾಂತ್ರಿಕ ಯಶಸ್ಸನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ವೇದಿಕೆಯಲ್ಲಿ, “ಇರಾನ್ ಜೊತೆಗಿನ ಒಪ್ಪಂದ ಪೂರ್ಣಗೊಂಡಿದೆ. ಜಗತ್ತಿನ ಹಡಗುಗಳೇ, ನಿಮ್ಮ ಇಂಜಿನ್ ಸ್ಟಾರ್ಟ್ ಮಾಡಿ, ತೈಲವು ಮುಕ್ತವಾಗಿ ಹರಿಯಲಿ!” ಎಂದು ಬರೆಯುವ ಮೂಲಕ ಇರಾನ್ ಮೇಲಿನ ನೌಕಾ ದಿಗ್ಬಂಧನ ಹಿಂಪಡೆದಿರುವುದನ್ನು ಖಚಿತಪಡಿಸಿದ್ದಾರೆ.

Must Read