2022ರ ಐಪಿಎಲ್‌ ನಲ್ಲಿ ಅಬ್ಬರಿಸಿದ್ದ ಬ್ಯಾಟ್‌‌ ಕಿಚ್ಚ ಸುದೀಪ್‌ ಗೆ ಗಿಫ್ಟ್‌ ನೀಡಿದ ಜೋಸ್‌ ಬಟ್ಲರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕನ್ನಡದ ಖ್ಯಾತ ಚಿತ್ರ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರಿಗೆ ಕ್ರಿಕೆಟ್‌ ಮೇಲಿರುವ ವಿಶೇಷ ಒಲವನ್ನು ಎಲ್ಲರೂ ಬಲ್ಲರು. ಸ್ವತಃ ಆಟಗಾರನಾಗಿಯೂ ವಿವಿಧ ಪಂದ್ಯಾವಳಿಗಳಲ್ಲಿ ಕಣಕ್ಕಿಳಿಯುವ ಸುದೀಪ್‌, ಭಾರತ ತಂಡ ವಿಶೇಷ ಪಂದ್ಯಗಳನ್ನಾಡುವಾಗ ಕ್ರೀಡಾಂಗಣಕ್ಕೆ ತೆರಳಿ ಆಟಗಾರರನ್ನು ಹುರಿದುಂಬಿಸುತ್ತಾರೆ. ಇದೀಗ ‘ವಿಕ್ರಾಂತ್‌ ರೋಣʼ ಚಿತ್ರದ ಬಿಡುಗಡೆಗೆ ಸಜ್ಜಾಗಿರುವ ಸುದೀಪ್‌ ಗೆ ಸ್ಟಾರ್‌ ಆಟರೊಬ್ಬರ ಕಡೆಯಿಂದ ಬಿಗ್‌ ಗಿಫ್ಟ್‌ ಒಂದು ಸಿಕ್ಕಿದೆ ಈ ಉಡುಗರೆ ನೋಡುತ್ತಲೇ ಸುದೀಪ್‌ ಖುಷಿಯಿಂದ ಉಬ್ಬಿಹೋಗಿದ್ದಾರೆ.
ಐಪಿಎಲ್‌ನ ರಾಜಸ್ಥಾನ ರಾಯಲ್ಸ್ ತಂಡದ ಓಪನರ್ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರು ಕಿಚ್ಚ ಸುದೀಪ್‌ಗೆ ತಮ್ಮ ಬ್ಯಾಟ್ ಅನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ.

2022ರ ಐಪಿಎಲ್‌ ಸೀಸನ್‌ನಲ್ಲಿ ಜೋಸ್ ಬಟ್ಲರ್ ಬ್ಯಾಟ್‌ ಅಬ್ಬರಿಸಿತ್ತು. ಅಮೋಘ ಫಾರ್ಮ್‌ ನಲ್ಲಿದ್ದ ಬಟ್ಲರ್‌ ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದರು. 15 ಪಂದ್ಯಗಳಲ್ಲಿ ಬರೋಬ್ಬರಿ 718 ರನ್‌ಗಳನ್ನು ಕಲೆಹಾಕಿದ್ದ ಬಟ್ಲರ್ ಹೋರಾಟದ ಬಲದಿಂದಲೇ ರಾಜಸ್ಥಾನ ರಾಯಲ್ಸ್ ಫೈನಲ್ ಹಂತಕ್ಕೆ ತಲುಪಿತ್ತು. 2022ರ ಐಪಿಎಲ್ ಟೋರ್ನಿಯಲ್ಲಿ ಆರೆಂಜ್‌ ಕ್ಯಾಪ್‌ ಗಳಿಸಿಕೊಟ್ಟಿದ್ದ ಕ್ರಿಕೆಟ್‌ ಬ್ಯಾಟ್‌ ಅನ್ನು ಜೋಸ್ ಬಟ್ಲರ್ ಅವರು ನಟ ಸುದೀಪ್‌ ಅವರಿಗೆ ಗಿಫ್ಟ್‌ ಆಗಿ ನೀಡಿದ್ದಾರೆ.

ಧನ್ಯವಾದ ಸಲ್ಲಿಸಿದ ಸುದೀಪ್:
ಸುದೀಪ್‌ಗೆ ಕಳುಹಿಸಿದ ಬ್ಯಾಟ್‌ನಲ್ಲಿ ಜೋಸ್ ಬಟ್ಲರ್ ಅವರ ಸಹಿ ಕೂಡ ಇದೆ. ಕಿಚ್ಚ ಸುದೀಪ್ ಈ ಕುರಿತಾಗಿ ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಇದೇ ವೇಳೆ ಆ ಬ್ಯಾಟ್ ಸಿಗಲು ಸಹಾಯ ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ಸಹ ಆಟಗಾರ ಕನ್ನಡಿಗ ಕೆಸಿ ಕಾರ್ಯಪ್ಪ ಹಾಗೂ ರಾಜಸ್ಥಾನ ರಾಯಲ್ಸ್ ತಂಡಕ್ಕೂ ಕೂಡ ಸುದೀಪ್ ಧನ್ಯವಾದ ಹೇಳಿದ್ದಾರೆ. ಈ ಬ್ಯಾಟ್ ಅನ್ನು ಕೊನೆಯವರೆಗೂ ಜತನದಿಂದ  ಕಾಯ್ದಿರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!