ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು, ಕಾನೂನು ಎಲ್ಲರಿಗೂ ಅನ್ವಯಿಸಬೇಕು:ಎಸ್.ಎಲ್.ಭೈರಪ್ಪ

ಹೊಸದಿಗಂತ ವರದಿ ಮೈಸೂರು:

ಪದ್ಮ ಭೂಷಣ ಪ್ರಶಸ್ತಿಗೆ ನನ್ನನ್ನ ಪರಿಗಣಿಸಿರುವುದಕ್ಕೆ ಸಂತಸ ತಂದಿದೆ. ನರೇಂದ್ರ ಮೋದಿ ಅವರು ಪ್ರಧಾನಿ ಆದ ಕಾರಣವೇ ನನಗೆ ಈ ಪ್ರಶಸ್ತಿ ಬಂದಿದೆ. ಇಲ್ಲದೆ ಇದ್ದರೆ ಬರುತ್ತಿರಲಿಲ್ಲ ಎಂದು ಖ್ಯಾತ ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಹೇಳಿದರು.
ಗುರುವಾರ ಮೈಸೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ
ಪದ್ಮಭೂಷಣ ಕೊಟ್ಟಿರುವುದು ಸಂತೋಷವಾಗಿದೆ. ಆದರೂ ನನ್ನ ಅನೇಕ ಪುಸ್ತಕಗಳನ್ನು ಓದಿ ಜನ ಸಂತೋಷಪಟ್ಟಿದ್ದಾರೆ ಅದು ಎಲ್ಲದಕ್ಕಿಂತ ಮಿಗಿಲಾದ ಅವಾರ್ಡ್ ಎಂದರು.

ಈಗ ನನಗೆ 92 ವರ್ಷ, ನಾನು ಸತ್ತ ನಂತರವೂ ನನ್ನ ಪುಸ್ತಕ ಗಳ ಬಗ್ಗೆ ಅಷ್ಟೇ ಪ್ರೀತಿ ಇರುತ್ತದೆಯೇ ಎಂಬುದು ನನ್ನ ಪ್ರಶ್ನೆ.
ಕುಮಾರವ್ಯಾಸನ ಮಹಾಭಾರತ ಪುಸ್ತಕವನ್ನು ನೂರಾರು ವರ್ಷಗಳಾದ ಪ್ರತಿ ಹಳ್ಳಿಗಳಲ್ಲಿಯೂ ಓದಿಸಿ ಹೇಳುತ್ತಾರೆ, ಆ ಪುಸ್ತಕದಲ್ಲಿ ಅಂತಹ ಶಕ್ತಿ ಇದೆ. ಅದೇ ರೀತಿ ನನ್ನ ಬರವಣಿಗೆಯಲ್ಲೂ ಆ ಶಕ್ತಿ ಇದೆಯೆ ಎಂದು ತಿಳಿದುಕೊಳ್ಳಲು ನಾನೂ ಇರಲ್ಲ, ನೀವೂ ಇರಲ್ಲ ಎಂದು ನಗೆಯಾಡಿದರು.

ಲೇಖಕ ಸತ್ತೇ ಸಾಯುತ್ತಾನೆ, ಆದ್ರೆ, ಅವನ ಪುಸ್ತಕ ಎಂದೂ ಜೀವಂತ. ಎಷ್ಟು ದಿನ ಪುಸ್ತಕ ಇರುತ್ತೋ ಅಲ್ಲಿವರೆಗೆ ಲೇಖಕ ಸದಾ ಜೀವಂತ ನಾನು ಬರೆದ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ನನಗೆ ಸಂತೋಷ.

ಮೈಸೂರು ಸ್ಪೂರ್ತಿ; ಹೈಸ್ಕೂಲ್ ಓದೋಕೆ ಮೈಸೂರಿಗೆ ಬಂದೆ. ಮೈಸೂರು ಭಾವನಾತ್ಮಕವಾಗಿ ನಂಗೆ ಸಾಕಷ್ಟು ತೃಪ್ತಿ ಕೊಟ್ಟ ಊರು. 12 ವರ್ಷ ನಾನು ಉತ್ತರ ಭಾರತದಲ್ಲಿದ್ದು ಬಂದೆ. ನನ್ನ ಅನೇಕ ಕಾದಂಬರಿಗಳು ಹುಟ್ಟಿದ್ದು ಇಲ್ಲೆ. ಎಷ್ಟೋ ಬರವಣಿಗೆಗಳಿಗೆ ಮೈಸೂರು ಸ್ಪೂರ್ತಿಯಾಗಿದೆ . ಮೈಸೂರು ಜನ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಸದಾ ಮೈಸೂರು ಜನರಿಗೆ ಋಣಿ ಎಂದರು.

ನರೇಂದ್ರ ಮೋದಿ ಅವರು 2029 ರ ನಂತರ ನಿವೃತ್ತಿ ಹೊಂದಲಿ
ನರೇಂದ್ರ ಮೋದಿ ಈ ದೇಶ ಎಂದೂ ಕಂಡಿರದಂತಹ ಪ್ರಧಾನಿ. ಎಷ್ಟೋ ವರ್ಷಗಳ ಬಳಿಕ ಇಂಥಾ ಒಬ್ಬ ಉತ್ತಮ ಪ್ರಧಾನಿ ನಮ್ಮ ದೇಶಕ್ಕೆ ಸಿಕ್ಕಿದ್ದಾರೆ. ನನಗೆ ಈ ಪ್ರಶಸ್ತಿ ಕೊಟ್ಟರು ಅಂತ ನಾನು ಈ ಮಾತನ್ನ ಹೇಳುತ್ತಿಲ್ಲ. 2024 ರಿಂದ 2029 ರವರೆಗೂ ಮೋದಿ ಮತ್ತೆ ಪ್ರಧಾನಿ ಆಗಬೇಕು. ನರೇಂದ್ರ ಮೋದಿ ಅವರು 2029 ರ ನಂತರ ನಿವೃತ್ತಿ ಹೊಂದಲಿ ಎಂದು ಸಲಹೆ ನೀಡಿದರು.

ಬೈಗುಳ ಬಿಟ್ಟು ಬಿಡಿ, ಯಾವ ಕೆಲಸ ಆಗಬೇಕೆಂದು ಹೇಳಿ

ಬೇರೆ, ಬೇರೆ ದೇಶದ ರಾಜಕೀಯ ನೋಡಿದ್ದೇನೆ. ಎರಡು ಪಕ್ಷಗಳು ಚುನಾವಣೆಯನ್ನು ಕ್ರೀಡಾ ಮನೋಭಾವದಿಂದ ಸ್ವೀಕಾರ ಮಾಡಿರುತ್ತಾರೆ. ಆದರೆ ನಮ್ಮಲ್ಲಿ ಆ ಮನೋಭಾವಿಲ್ಲ, ಬೈಗುಳ ಇದೆ. ಇದರಿಂದಾಗಿ ಪತ್ರಿಕೆಗಳನ್ನು ನೋಡುವುದಕ್ಕೆ ಬೇಜಾರು ಆಗುತ್ತದೆ. ಬೈಗುಳ, ಆರೋಪ, ಪ್ರತ್ಯಾಪರೋಪ ಬಿಟ್ಟು ಬಿಡಿ, ಎಕಾನಮಿ ಸ್ಟಡಿ ಮಾಡಿ, ತಜ್ಞರನ್ನು ಇಟ್ಟುಕೊಂಡು ಸರ್ಕಾರ ಇಂತಥಹ ಕೆಲಸ ಮಾಡಿಲ್ಲ ಎಂದು ಹೇಳಿ, ಅದನ್ನು ಬಿಟ್ಟು ಬೈಗುಳ ರೀತಿ ಸರಿಯಲ್ಲ ಎಂದು ವಿಪಕ್ಷಗಳಿಗೆ ಕಿವಿ ಮಾತು ಹೇಳಿದರು.

ಸಮಾನ ನಾಗರೀಕತೆ ಕಾಯ್ದೆಯ ಜಾರಿ ನಮಗೆ ಖಂಡಿತ ಬೇಕಾಗಿದೆ. ಎಲ್ಲಾ ಕಾನೂನು ಎಲ್ಲರಿಗೂ ಅನ್ವಯವಾಗಬೇಕು, ಅಲ್ಪಸಂಖ್ಯಾತರು ಎಂದು ಅವರನ್ನು ಯಾಕೇ ದೇಶದ ಕಾನೂನುಗಳಿಂದ ಬೇರೆ ಇಟ್ಟರು ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!