Tuesday, March 28, 2023

Latest Posts

ಬೇಸಿಗೆಯಲ್ಲಿ ಲೋಡ್ ಶೆಡಿಂಗ್ ಮಾಡದಿರಲು ಎಸ್ಕಾಂಗಳ ನಿರ್ಧಾರ

ಹೊಸದಿಗಂತ ವರದಿ ತುಮಕೂರು:

ವಿದ್ಯಾರ್ಥಿಗಳು ಮತ್ತು ರೈತರ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಮುಂದಿನ ಮೂರು ತಿಂಗಳ ಅವಧಿಗೆ ರಾಜ್ಯದಲ್ಲಿ ಲೋಡ್ ಶೆಡಿಂಗ್ ಮಾಡದಿರಲು ಎಲ್ಲಾ ಎಸ್ಕಾಂಗಳು ನಿರ್ಧರಿಸಿವೆ.

ವಿದ್ಯುತ್ ವ್ಯವಹಾರ ಸಮಿತಿಯ ಅಧ್ಯಕ್ಷರು ಆಗಿರುವ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಎಲ್ಲಾ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಈಗಾಗಲೇ ಆರಂಭಗೊಂಡಿವೆ. ಅಲ್ಲದೇ ರೈತರಿಗೂ ಕೂಡ ಹೆಚ್ಚಿನ ವಿದ್ಯುತ್ ಪೂರೈಸುವ ಜವಾಬ್ದಾರಿ ಎಸ್ಕಾಂಗಳ ಮೇಲಿದೆ. ಬೇಸಿಗೆಯಲ್ಲಿ ತಡೆರಹಿತ ವಿದ್ಯುತ್ ಪೂರೈಸಲು ರೈತ ಪ್ರತಿನಿಧಿಗಳು ಇತ್ತೀಚೆಗೆ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಮುಂದಿನ ಮೂರು ತಿಂಗಳ ಅವಧಿಗೆ ಬೇಕಾಗುವ ವಿದ್ಯುತ್ ಬೇಡಿಕೆ ಕುರಿತು ವೈಜ್ಞಾನಿಕವಾಗಿ ಅಧ್ಯಯನ ನಡೆಸಿರುವ ಎಲ್ಲಾ ಎಸ್ಕಾಂಗಳು ಅದಕ್ಕೆ ಬೇಕಾಗಿರುವ ವಿದ್ಯುತ್ ಖರೀದಿ ಮಾಡಿ ಗ್ರಾಹಕರಿಗೆ ಪೂರೈಸಲು ನಿರ್ಧರಿಸಿವೆ ಎಂದು ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಈ ಮೂರು ತಿಂಗಳ ಅವಧಿಯಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಲಿದ್ದು, ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಲು ಎಲ್ಲಾ ಎಸ್ಕಾಂಗಳು ನಿರ್ಧಾರ ಕೈಗೊಂಡಿವೆ.

ಬೇಸಿಗೆ ಕಾಲದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ಕ್ರಮವಹಿಸಲು ಇಂಧನ ಇಲಾಖೆಯು ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಾಂಗಳಿಗೆ ನಿರ್ದೇಶನ ನೀಡಿದೆ.

ಬೇಸಿಗೆ ಕಾಲದಲ್ಲಿ ವಿದ್ಯುತ್ ಖರೀದಿಗೆ ಬೇಕಾಗುವ ಹಣಕಾಸಿನ ವ್ಯವಸ್ಥೆಯನ್ನು ಸಿದ್ಧತೆ ಮಾಡಿಕೊಳ್ಳುವಂತೆ ಇಂಧನ ಇಲಾಖೆ ಎಲ್ಲಾ ಎಸ್ಕಾಂಗಳಿಗೆ ಈಗಾಗಲೇ ಸೂಚನೆ ನೀಡಿದೆ. ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಬೆಸ್ಕಾಂ ಎಂಡಿ ತಿಳಿಸಿದರು.

ಬೇಸಿಗೆಯಲ್ಲಿ ಬೆಸ್ಕಾಂ ವಿದ್ಯುತ್ ಬೇಡಿಕೆ ವಿವರ :

ಮಾರ್ಚ್ ತಿಂಗಳಿಂದ ಮೇ ವರೆಗೆ ವಿದ್ಯುತ್ ಬೇಡಿಕೆ ಮತ್ತು ಬಳಕೆಯನ್ನು ಬೆಸ್ಕಾಂ ಈಗಾಗಲೇ ಅಂದಾಜಿಸಿದ್ದು, ಮಾರ್ಚ್ ತಿಂಗಳಲ್ಲಿ ದಿನದ ಗರಿಷ್ಠ ಬೇಡಿಕೆ 7600 ಮೆಗಾ ವ್ಯಾಟ್ ತಲಪುವ ಸಾಧ್ಯತೆ ಇದೆ. ಕಳೆದ 12 ದಿನಗಳಿಂದ ಸರಾಸರಿ ದಿನದ ವಿದ್ಯುತ್ ಬೇಡಿಕೆ 74೦0 ಮೆಗಾ ವ್ಯಾಟ್ ದಾಖಲಾಗಿದೆ. ಮಾರ್ಚ್ ತಿಂಗಳಲ್ಲಿ ದಿನದ ವಿದ್ಯುತ್ ಸರಾಸರಿ 132 ಮಿಲಿಯನ್ ಯೂನಿಟ್ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಅದೇ ರೀತಿ ಏಪ್ರಿಲ್ ತಿಂಗಳಲ್ಲಿ ದಿನ ವಿದ್ಯುತ್ ಬೇಡಿಕೆ 7650 ಮೆಗಾ ವ್ಯಾಟ್ ತಲುಪಲಿದ್ದು, ದಿನದ ವಿದ್ಯುತ್ ಬಳಕೆ ಸರಾಸರಿ 135 ಮಿಲಿಯನ್ ಯೂನಿಟ್ ಆಗಲಿದೆ.

ಮೇ ತಿಂಗಳ ದಿನದ ವಿದ್ಯುತ್ ಬೇಡಿಕೆ 6800 ಮೆಗಾ ವ್ಯಾಟ್ಗೆ ಇಳಿಯಲಿದ್ದು, ದಿನದ ವಿದ್ಯುತ್ ಬಳಕೆ ಸರಾಸರಿ 124 ಮಿಲಿಯನ್ ಯೂನಿಟ್ ಆಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!