Saturday, December 9, 2023

Latest Posts

ಮಾನವ-ವನ್ಯಪ್ರಾಣಿ ಸಂಘರ್ಷ ತಡೆಗೆ ಅಗತ್ಯ ಕ್ರಮ: ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಭರವಸೆ

ಹೊಸದಿಗಂತ ವರದಿ,ಶ್ರೀಮಂಗಲ:

ಕೊಡಗು ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳು ಹಾಗೂ ಮಾನವ ಸಂಘರ್ಷ ಹೆಚ್ಚಾಗುತ್ತಿದ್ದು, ಅವುಗಳನ್ನು ಶಾಶ್ವತವಾಗಿ ತಡೆಗಟ್ಟಲು ತಕ್ಷಣದ ಮತ್ತು ದೀರ್ಘಕಾಲಿಕ ಯೋಜನೆಗಳನ್ನು ರೂಪಿಸಲಾಗುವುದು. ಎಂದು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿ.ಸಿ.ಸಿ.ಎಫ್) ಮತ್ತು ಅರಣ್ಯ ಇಲಾಖೆಯ ಹೆಚ್.ಓ.ಎಫ್.ಎಫ್ ಸಂಜಯ್‍ಮೋಹನ್ ಅವರು ಭರವಸೆ ನೀಡಿದರು.
ಮೈಸೂರಿನ ಅರಣ್ಯ ಭವನದಲ್ಲಿ ಕೊಡಗು ಜಿಲ್ಲೆಯ ವನ್ಯಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೊಡಗು ಸಂರಕ್ಷಣಾ ವೇದಿಕೆ ಸಲ್ಲಿಸಿದ ಮನವಿಗೆ ಸ್ಪಂದಿಸಿ ತಮ್ಮ ನೇತೃತ್ವದಲ್ಲಿ ಆಯೋಜಿಸಿದ್ದ ಅಧಿಕಾರಿಗಳು ಮತ್ತು ಕೊಡಗು ಜಿಲ್ಲೆಯ ವಿವಿಧ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಹಿಂದೆ ಹುಲಿ ಸೆರೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದೆವು. ಈಗ ಎರಡು, ಮೂರು ಜಾನುವಾರುಗಳ ಮೇಲೆ ಒಂದೇ ಸ್ಥಳದಲ್ಲಿ ಒಂದೇ ಹುಲಿ ದಾಳಿ ನಡೆಸಿರುವ ಘಟನೆ ನಡೆಯುತ್ತಿದ್ದಂತೆ, ಶೀಘ್ರದಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆ. ಎಲ್ಲಾ ಕಾಡಾನೆಗಳಿಂದ ಸಮಸ್ಯೆಯಾಗಿಲ್ಲ. ಜಿಲ್ಲೆಯಲ್ಲಿ 70ರಿಂದ 90 ಕಾಡಾನೆಗಳು ಅರಣ್ಯದಿಂದ ಗ್ರಾಮಕ್ಕೆ ನುಗ್ಗುತ್ತಿದ್ದು, ಅವುಗಳ ಬಗ್ಗೆ ನಿಗಾವಹಿಸಲಾಗುತ್ತಿದೆ ಎಂದು ನುಡಿದರು.
ಐದು ಆನೆಗಳ ಸೆರೆ: ಶಾಶ್ವತ ಯೋಜನೆ ರೂಪಿಸಲು ಅನುದಾನದ ಕೊರತೆಯಿದೆ. ಅದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಯೋಜನೆ ರೂಪಿಸಲಾಗುವುದು. ಉಪಟಳ ನೀಡುತ್ತಿರುವ ಐದು ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಲು ಆದೇಶಿಸಲಾಗಿದ್ದು, ಅದರಲ್ಲಿ ಒಂದನ್ನು ಮಾತ್ರ ಸ್ಥಳಾಂತರಿಸಲಾಗಿದೆ ದೂರಿನ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಹಾಸನ ಜಿಲ್ಲೆಯಲ್ಲಿ ಎಸ್.ಎಂ.ಎಸ್ ಅಲರ್ಟ್ ಸಿಸ್ಟಮ್ ತುಂಬಾ ಅನುಕೂಲವಾಗಿದ್ದು, ಅದನ್ನು ಕೊಡಗಿನಲ್ಲಿ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವನ್ಯ ಪ್ರಾಣಿಗಳಿಗೆ ಆಹಾರ ಅಲ್ಲದೇ ಅರಣ್ಯವನ್ನು ವ್ಯಾಪಿಸಿಕೊಳ್ಳುತ್ತಿರುವ ಲಂಟಾನ ಪ್ರಭೇದದ ಗಿಡಗಳನ್ನು ತೆಗೆದು ಹುಲ್ಲು ಮತ್ತು ಬಿದಿರು ಹಾಕಲು ಕ್ರಮವಹಿಸಲಾಗಿವುದು. ಇದರೊಂದಿಗೆ ವನ್ಯ ಪ್ರಾಣಿಗಳು ನುಸುಳು ತಡೆಗೆ ಕಂದಕಗಳನ್ನು ಹೆಚ್ಚಾಗಿ ನಿರ್ಮಿಸಿ, ದುರಸ್ತಿ ಅಗತ್ಯವಿರುವೆಡೆಗೆ ಟೆಂಡರ್ ಕರೆದು ಯೋಜನೆ ರೂಪಿಸಲಾಗುವುದು ಎಂದು ಸಂಜಯ್‍ಮೋಹನ್ ತಿಳಿಸಿದರು.
ಇಲಾಖೆಯೇ ಹಿಟಾಚಿ ಖರೀದಿಸಲಿ: ಇದಕ್ಕೂ ಮೊದಲು ಮಾತನಾಡಿದ ಕೊಡಗು ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಅವರು, ಈ ಹಿಂದೆ ಜಿಲ್ಲೆಯ ಸಿಸಿಎಫ್ ಆಗಿದ್ದ ಮನೋಜ್‍ಕುಮಾರ್ ಅವರಿಗೆ ಕೊಡಗಿನ ವನ್ಯಪ್ರಾಣಿಗಳ ಹಾವಳಿ ತಡೆಗಟ್ಟಲು ಮನವಿ ನೀಡಲಾಗಿತ್ತು. ಆದರೆ, ಅವರನ್ನು ವರ್ಗಾವಣೆ ಮಾಡಿದ್ದರಿಂದ ಈ ಯೋಜನೆ ನೆನೆಗುದಿಗೆ ಬಿದ್ದಿದೆ. ವನ್ಯ ಪ್ರಾಣಿಗಳ ಹಾವಳಿಯಿಂದ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದೇ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಬೆಳೆ ನಷ್ಟಕ್ಕೆ ಪರಿಹಾರ ನೀಡುವ ಬದಲು ಶಾಶ್ವತ ಯೋಜನೆಯನ್ನು ರೂಪಿಸಬೇಕು. ಕಂದಕಗಳನ್ನು ದುರಸ್ತಿ ಪಡಿಸಲು ಅರಣ್ಯ ಇಲಾಖೆಯೇ ತಾಲೂಕಿಗೆ ಒಂದರಂತೆ ಸ್ವಂತ ಹಿಟಾಚಿಯನ್ನು ಖರೀದಿಸಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಬಹುಪಥದ ಹೆದ್ದಾರಿಗಳು, ರೈಲ್ವೆ ಮಾರ್ಗಕ್ಕೆ 10 ಸಾವಿರ ಕೋಟಿಗೂ ಹೆಚ್ಚು ಅನುದಾನವಿದೆ. ಆದರೆ, ವನ್ಯಪ್ರಾಣಿಗಳ ಹಾವಳಿ ತಡೆಗೆ ಅನುದಾನದ ಕೊರತೆ ಏಕೆ ಎಂದು ಪ್ರಶ್ನಿಸಿದ ಅವರು, ಸರ್ಕಾರ ಅಗತ್ಯವಾದ ಅನುದಾನವನ್ನು ಒದಗಿಸಬೇಕು. ಇದಕ್ಕಾಗಿ ಅರಣ್ಯ ಇಲಾಖೆಯೂ ಸಹ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಬೇಕೆಂದು ಹೇಳಿದರು.
ಅರಣ್ಯ ಅತಿಕ್ರಮ ತೆರವುಗೊಳಿಸಿ: ಕೊಡಗು ಸಂರಕ್ಷಣಾ ವೇದಿಕೆಯ ಸಂಚಾಲಕ ಕರ್ನಲ್ ಚೆಪ್ಪುಡಿರ ಪಿ. ಮುತ್ತಣ್ಣ ಅವರು ಮಾತನಾಡಿ, ದಕ್ಷಿಣ ಕೊಡಗಿನ ಕೇರಳ, ಕರ್ನಾಟಕ ಗಡಿಯ ಕುಟ್ಟದಲ್ಲಿ ಖಾಸಗಿ ಸಂಸ್ಥೆಗೆ ಸೇರಿದ ಕಾಫಿ ತೋಟ ಅರಣ್ಯ ಜಾಗವನ್ನು ಅತಿಕ್ರಮಣ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಬ್ರಹ್ಮಗಿರಿ, ನಾಗರಹೊಳೆ (ಬೇಗೂರು ಬ್ರಹ್ಮಗಿರಿ) ವನ್ಯಪ್ರಾಣಿಗಳ ಕಾರಿಡಾರ್’ಗೆ ತಡೆಯುಂಟಾಗಿದೆ. ಈ ತಡೆಯನ್ನು ತೆರವು ಮಾಡಿದರೆ ವನ್ಯಪ್ರಾಣಿಗಳು ಬ್ರಹ್ಮಗಿರಿಯಿಂದ ನಾಗರಹೊಳೆ ಮೂಲಕ ಕೇರಳದ ವಯನಾಡು, ಬಂಡಿಪುರದವರೆಗೆ ವಿಶಾಲ ಅರಣ್ಯದಲ್ಲಿ ಸಂಚರಿಸುತ್ತವೆ. ಹಾಗೆಯೇ ಮಡಿಕೇರಿ ವಿಭಾಗದಲ್ಲಿ ಅಕ್ರಮವಾಗಿರುವ ರಬ್ಬರ್ ಎಸ್ಟೇಟ್‍ಗಳು ವನ್ಯಪ್ರಾಣಿಗಳ ಕಾರಿಡಾರ್’ಗಳನ್ನು ಅತಿಕ್ರಮಿಸಿಕೊಂಡಿದ್ದು, ಇವುಗಳನ್ನು ಸರ್ಕಾರ ತಮ್ಮ ವಶಕ್ಕೆ ತೆಗೆದುಕೊಂಡರೆ ವನ್ಯಪ್ರಾಣಿಗಳ ಸಂಚಾರದ ಕಾರಿಡಾರ್ ವಿಸ್ತಾರವಾಗಲಿದೆ. ಇದರಿಂದ ವನ್ಯಪ್ರಾಣಿಗಳ ಹಾವಳಿಯೂ ಕಡಿಮೆಯಾಗುತ್ತದೆ ಎಂದು ಸಲಹೆ ನೀಡಿದರು.
ಜೀವಂತ ಬರುವ ವಿಶ್ವಾಸವಿಲ್ಲ: ಜಬ್ಭೂಮಿ ಸಂಘಟನೆಯ ಖಜಾಂಚಿ ಜಮ್ಮಡ ಗಣೇಶ್ ಅಯ್ಯಣ್ಣ ಅವರು ಮಾತನಾಡಿ, ವನ್ಯಪ್ರಾಣಿಗಳ ಹಾವಳಿಯಿಂದಾಗಿ ತೋಟಕ್ಕೆ ಹೋದ ಕಾರ್ಮಿಕರು ಹಾಗೂ ಬೆಳೆಗಾರರು ಜೀವಂತವಾಗಿ ವಾಪಾಸ್ಸು ಬರುವ ವಿಶ್ವಾಸವಿಲ್ಲದಾಗಿದೆ ಎಂದು ಗಮನಸೆಳೆದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ಎಂ. ರವೀಂದ್ರ ಅವರು ಮಾತನಾಡಿ, ವನ್ಯಪ್ರಾಣಿಗಳ ಹಾವಳಿ ತಡೆಗೆ ಅಗತ್ಯವಾದ ಅನುದಾನವನ್ನು ಜಿಲ್ಲೆಯ ಸಂಸದರು ಮತ್ತು ಶಾಸಕರುಗಳು ಮುಂದಿನ ಬಜೆಟ್‍ನಲ್ಲಿಯೇ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದರು. ಜನ ಜಾನುವಾರುಗಳ ಪ್ರಾಣಹಾನಿ ಮತ್ತು ಬೆಳೆ ನಷ್ಟಕ್ಕೆ ಕೊಡುವ ಪರಿಹಾರದ ಬದಲು ಶಾಶ್ವತ ಯೋಜನೆ ರೂಪಿಸಬೇಕು. ಇದಕ್ಕಾಗಿ ಪ್ರತಿ ವರ್ಷ ಕನಿಷ್ಟ 200 ಕೋಟಿಯಂತೆ ಪಂಚವಾರ್ಷಿಕ ಯೋಜನೆ ರೂಪಿಸಿ ಶಾಶ್ವತವಾದ ಯೋಜನೆ ರೂಪಿಸಬೇಕೆಂದು ಸಲಹೆ ನೀಡಿದರು.
ಅರಣ್ಯ ಅಭಿವೃದಿ ನಿಗಮದ ಮಾಜಿ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಅವರು ಕೊಡಗು ಜಿಲ್ಲೆಗೆ ಪ್ರತ್ಯೇಕವಾದ ಮುಖ್ಯ ಸಂರಕ್ಷಣಾಧಿಕಾರಿ ನೇಮಿಸಬೇಕು. ಇಲಾಖೆಯಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿಮಾಡಿ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕು. ಅರಣ್ಯದೊಳಗೆ ನೀರು ಹಾಗೂ ಆಹಾರವನ್ನು ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
282 ಕಿ.ಮೀ.ಕಂದಕ ನಿರ್ಮಿಸಿ: ಕೊಡಗು ಬೆಳೆಗಾರರ ಒಕ್ಕೂಟದ ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶರಿ ಸುಬ್ಬಯ್ಯ ಅವರು ಮಾತನಾಡಿ ಜಿಲ್ಲೆಯಲ್ಲಿ ಸಿಸಿಎಫ್ ಸೇರಿದಂತೆ ಅರಣ್ಯ ಅಧಿಕಾರಿಗಳನ್ನು ಕನಿಷ್ಟ ಮೂರು ವರ್ಷ ವರ್ಗಾವಣೆ ಮಾಡದೇ ವನ್ಯಪ್ರಾಣಿಗಳ ಹಾವಳಿ ತಡೆಗಟ್ಟಲು ಶಾಶ್ವತ ಯೋಜನೆ ರೂಪಿಸಬೇಕು. ಜಿಲ್ಲೆಯ ಅರಣ್ಯ ಸರಹದ್ದು ಸುಮಾರು 282 ಕಿ.ಮೀ ಇದ್ದು, ಇಲ್ಲಿಗೆ ಕಂದಕ ನಿರ್ಮಿಸಬೇಕೆಂದರು.
ಕೊಡಗು ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ ಅವರು ಮಾತನಾಡಿ ಅರಣ್ಯದ ಸರಹದ್ದಿನಲ್ಲಿ ನೀರಾವರಿ ಕಾಲುವೆ ಮಾದರಿಯಲ್ಲಿ ಕಾಂಕ್ರಿಟ್ ತಡೆಗೋಡೆ ನಿರ್ಮಿಸಿ ಕನಿಷ್ಟ 15 ಅಡಿ ಆಳ, 20 ಅಡಿ ಅಗಲದ ಕಂದಕ ನಿರ್ಮಿಸುವುದರಿಂದ ಮಣ್ಣು ಕುಸಿಯುವುದು ಹಾಗೂ ಕಾಡು ಬೆಳೆಯುವುದನ್ನು ತಡೆಗಟ್ಟಿ ದುರಸ್ತಿ ಕಾರ್ಯ ಇಲ್ಲದೇ ಕಂದಕ ನಿರ್ಮಿಸಿದಲ್ಲಿ ವನ್ಯಪ್ರಾಣಿಗಳು ನುಸುಳಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳೆಗಾರ ಮಲ್ಲಮಾಡ ಪ್ರಭು ಪೂಣಚ್ಚ, ಸಣ್ಣ ಬೆಳೆಗಾರರ ಸಂಘದ ಅಧ್ಯಕ್ಷ ಚೇರಂಡ ನಂದ ಸುಬ್ಬಯ್ಯ ಅವರು ವನ್ಯಪ್ರಾಣಿಗಳ ಹಾವಳಿ ತಡೆಗೆ ಹಲವು ಸಲಹೆ ನೀಡಿದರು.
ಈ ಸಂದರ್ಭ ಕೊಡಗು ಸಂರಕ್ಷಣಾ ವೇದಿಕೆಯ ಪ್ರಮುಖರಾದ ಮಲ್ಲಮಾಡ ಪ್ರಭು ಪೂಣಚ್ಚ, ಕೊಡಗು ಜಿಲ್ಲೆಯ ಅರಣ್ಯ ಇಲಾಖೆಯ ವಾರ್ಡನ್ ಹಾಗೂ ಕೊಡಗು ವನ್ಯಜೀವಿ ಸಂಘದ ಉಪಾಧ್ಯಕ್ಷ ಕುಂಞಂಗಡ ಬೋಸ್ ಮಾದಪ್ಪ, ಬಲ್ಲಚಂಡ ರಾಯ್ ಬೋಪಣ್ಣ ಭಾಗವಹಿಸಿದ್ದರು.
ಸಭೆಯಲ್ಲಿ ಅರಣ್ಯ ಇಲಾಖೆಯ ಜಗತ್‍ ರಾಮ್, ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಮಡಿಕೇರಿ ವೃತ್ತದ ಡಾ. ಡಿ. ಶಂಕರ್, ಮೈಸೂರಿನ ಡಿ.ಸಿ.ಎಫ್ ಕೆ. ಕಮಲಾ ಮತ್ತು ಕರಿಕಾಳನ್, ನಾಗರಹೊಳೆ ಹುಲಿ ಸಂರಕ್ಷಣಾ ಯೋಜನೆಯ ನಿರ್ದೇಶಕ ಮಹೇಶ್‍ಕುಮಾರ್, ಹುಣಸೂರು ಡಿ.ಸಿ.ಎಫ್ ಎಲ್. ಪ್ರಶಾಂತ್‍ಕುಮಾರ್, ಮಡಿಕೇರಿ ವನ್ಯ ಜೀವಿ ಡಿ.ಸಿ.ಎಫ್ ಶಿವರಾಂ ಬಾಬು, ಡಬ್ಲು.ಡಬ್ಲು.ಎಫ್ ವನ್ಯಪ್ರಾಣಿ ಸಂಶೋಧಕ ಡಿ. ಭೂಮಿನಾಥನ್, ಡಬ್ಲು.ಡಬ್ಲು.ಎಫ್‍ನ ತಂಡ ಪ್ರಮುಖರಾದ ಸಂಕೇತ್ ಭಾಲೆ, ಗಣೇಶ್ ಪ್ರಸಾದ್, ವೀರಾಜಪೇಟೆ ಡಿ.ಸಿ.ಎಫ್ ಚಕ್ರಪಾಣಿ , ಮಡಿಕೇರಿ ವನ್ಯಜೀವಿ ಎ.ಸಿ.ಎಫ್ ದಯಾನಂದ, ಸೋಮವಾರಪೇಟೆ ವಿಭಾಗದ ಎ.ಸಿ.ಎಫ್ ಕೆ.ಎ. ನೆಹರು, ಕುಶಾಲನಗರ ಆರ್.ಎಫ್.ಓ ಅನನ್ಯಕುಮಾರ್ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!