ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆಗಾಲ ಜೂನ್‌ನಲ್ಲಿ ಆರಂಭವಾಗಿದ್ದರೂ, ತಿಂಗಳು ಕಳೆದರೂ ಮಳೆಯ ಹನಿಗಳೇ ಕಾಣಿಸುತ್ತಿಲ್ಲ. ವಿಜಯಪುರ ಜಿಲ್ಲೆಯಲ್ಲಿ ವರ್ಷಧಾರೆಗಾಗಿ ಜನ ಹಾತೊರೆಯುತ್ತಿದ್ದಾರೆ. ಮಳೆಯಿಲ್ಲದೆ ಆಲಮಟ್ಟಿ ಜಲಾಶಯ ಖಾಲಿಯಾಗಿ ಕಾಣಿಸುತ್ತಿದೆ.
ಕೃಷ್ಣೆಯ ಒಡಲು ಬತ್ತಿಹೋಗಿದ್ದು, ಬಾಗಲಕೋಟೆ-ವಿಜಯಪುರ ಜಿಲ್ಲೆಯ ಜನರಲ್ಲಿ ಆತಂಕ ಆರಂಭವಾಗಿದೆ. ಇದರ ಜೊತೆಗೆ ಮೀನುಗಾರಿಕೆಯೇ ಆಧಾರವಾಗಿರುವ ಜನರ ಹೊಟ್ಟೆಯೂ ಖಾಲಿಯಾಗಿದೆ. ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಲಾಲಬಾಹದ್ದೂರ್ ಶಾಸ್ತ್ರಿ ಜಲಾಶಯ ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಜನರ ಜೀವನಾಡಿ ಆಗಿದೆ. ಅವಳಿ ಜಿಲ್ಲೆಗಳ ಜನರು, ಜಾನುವಾರುಗಳು, ಜಮೀನು ಈ ಜಲಾಶಯದ ಮೇಲೆ ಅವಲಂಬಿತವಾಗಿವೆ. 123 ಟಿಎಂಸಿ ಸಾಮರ್ಥ್ಯ ಇರುವ ಈ ಜಾಲಾಶಯದಲ್ಲಿ ಸದ್ಯ ಬಳಕೆಗೆ ಇರೋದು ಕೇವಲ 4 ಟಿಎಂಸಿ ನೀರು. ಇನ್ನೊಂದು ವಾರದಲ್ಲಿ ಮಳೆಯಾಗದಿದ್ದರೆ ಅವಳಿ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆಯೂ ಕಷ್ಟ ಆಗಲಿದೆ. ಮಹಾರಾಷ್ಟ್ರದಲ್ಲಿ ಮಳೆ ಆದ್ರೆ ನೀರು ಬರಲಿದೆ ಎನ್ನುವ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ.
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನಿಂದ ನಾರಾಯಣಪುರ ಜಲಾಶಯದವರೆಗೆ ಸುಮಾರು 5 ಸಾವಿರಕ್ಕೂ ಅಧಿಕ ಕುಟುಂಬಗಳು ಮೀನುಗಾರಿಕೆಯನ್ನೇ ಜೀವನೋಪಾಯವನ್ನಾಗಿ ಮಾಡಿಕೊಂಡಿವೆ. ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಸುಮಾರು 48 ಸಾವಿರ ಹೆಕ್ಟೇರ್ ಹಾಗೂ ಮುಂಭಾಗದಲ್ಲಿ 14 ಸಾವಿರ ಹೆಕ್ಟೇರ್ ಜಲಪ್ರದೇಶವಿದ್ದು, ಈ ವ್ಯಾಪ್ತಿಯಲ್ಲಿ ಸುಮಾರು 400 ಅಧಿಕೃತ ಪರವಾನಿಗೆ ಪಡೆದ ಮೀನುಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಶೀಘ್ರವೇ ಮಳೆಯಾಗದಿದ್ದರೆ ಇವರೆಲ್ಲರ ಬದುಕು ಬೀದಿಗೆ ಬೀಳಲಿದೆ.



