ಮಾಜಿ ಸೈನಿಕರ ಸಮಾವೇಶ: ತಿಂಗಳಾಂತ್ಯದೊಳಗೆ ಸಿಎಂ ಬಳಿ ನಿಯೋಗ ತೆರಳಲು ನಿರ್ಧಾರ

ಹೊಸದಿಗಂತ, ವರದಿ, ಮಡಿಕೇರಿ:

ಮಾಜಿ ಸೈನಿಕರ ವಿವಿಧ ಬೇಡಿಕೆಗಳು ಮತ್ತು ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಈ ತಿಂಗಳ ಅಂತ್ಯದೊಳಗೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಲು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕ ನಿರ್ಧರಿಸಿದೆ.
ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಂಘದ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ಸೋಮಣ್ಣ, ಕಳೆದ ಬಾರಿ ಬೆಂಗಳೂರು ಚಲೋ ಸಮಾವೇಶ ನಡೆಸಿದಾಗ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಮಾತ್ರ ಭೇಟಿ ಮಾಡಲಾಗಿತ್ತು. ಈ ಬಾರಿ ದಿನಾಂಕ ನಿಗದಿಪಡಿಸಿಕೊಂಡು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕ್ಯಾಂಟೀನ್ ಮತ್ತು ಇಸಿಹೆಚ್‍ಎಸ್ ಸಮಸ್ಯೆಯ ಕುರಿತು ತಿಳಿಸಲಾಗುವುದು ಎಂದರು.
ಕೊಡಗಿನ ಮಟ್ಟಿಗೆ ಸೇನಾ ಕ್ಯಾಂಟೀನ್’ನ ನಿಯಮಗಳನ್ನು ಸಡಿಲಿಸಬೇಕು, ಇಸಿಹೆಚ್‍ಎಸ್ ಸಮಸ್ಯೆ ಬಗೆಹರಿಯಬೇಕು. ತಾಲೂಕುವಾರು ಮಾಜಿ ಯೋಧರಿಗಾಗಿ ಸಮುದಾಯ ಭವನ ಮತ್ತು ಮಾಜಿ ಯೋಧರ ಕಾಲೋನಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಬಲವರ್ಧನೆಗಾಗಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು. ಇಲ್ಲಿಯವರೆಗೆ ಸಂಘ ಸುಮಾರು 35 ಸಮಸ್ಯೆಗಳನ್ನು ಬಗೆಹರಿಸಿದೆ. ಪತ್ರದ ಮೂಲಕವೇ ಅನೇಕ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಮತ್ತು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ ಎಂದು ಸೋಮಣ್ಣ ತಿಳಿಸಿದರು.
ಸಂಘದ ಉಪಾಧ್ಯಕ್ಷ ಸುಧೀರ್ ಮಾತನಾಡಿ ಇತ್ತೀಚೆಗೆ ಬೆಂಗಳೂರಿನಲ್ಲಿ ಹೋರಾಟ ನಡೆಸಿದ ಪರಿಣಾಮವಾಗಿ ಜಮೀನು ಮಂಜೂರಾತಿ ಬಗ್ಗೆ ಸರ್ಕಾರದಿಂದ ಭರವಸೆ ದೊರೆತಿದೆ. ಸಂಘಟಿತರಾಗಿ ಹೋರಾಟ ನಡೆಸಿದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ. ಜಿಲ್ಲಾ ಸಂಘ ಆರಂಭಗೊಂಡಾಗ ಕೇವಲ 6 ಮಂದಿ ಇದ್ದರು, ಇಂದು 600 ಕ್ಕೂ ಹೆಚ್ಚು ಮಂದಿ ಸದಸ್ಯತ್ವವನ್ನು ಪಡೆದಿದ್ದಾರೆ ಎಂದರು.
ಜಿಲ್ಲೆಯಲ್ಲಿರುವ ಎಲ್ಲಾ ಮಾಜಿ ಸೈನಿಕರು ಸದಸ್ಯತ್ವ ಪಡೆದುಕೊಳ್ಳುವ ಮೂಲಕ “ಸೈನಿಕ ಕುಟುಂಬ” ರಚನೆಗೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಆಸಕ್ತರಿಗೆ ತರಬೇತಿ: ಜಂಟಿ ಕಾರ್ಯದರ್ಶಿ ಹಾಗೂ ಜೈ ಭಾರತ್ ಅಕಾಡೆಮಿಯ ತರಬೇತುದಾರ ಲವ ಮಾತನಾಡಿ ಪಿಯುಸಿ ಶಿಕ್ಷಣ ಮುಗಿಸಿದ ತಕ್ಷಣ ಮಕ್ಕಳನ್ನು ಸೇನೆಗೆ ಸೇರಿಸಬೇಕು, ಪದವಿ ಶಿಕ್ಷಣದ ಸಂದರ್ಭ ಸೇನೆಗೆ ಸೇರಲು ಆಸಕ್ತಿ ತೋರಿದರೆ ವಯೋಮಿತಿ ಮೀರಿ ಹೋಗಿರುತ್ತದೆ. ಆದ್ದರಿಂದ ಪಿಯುಸಿ ಸಂದರ್ಭದಲ್ಲೇ ಹೆಚ್ಚು ಹೆಚ್ಚು ಮಂದಿ ಸೇನೆಗೆ ಸೇರಿಕೊಳ್ಳಿ, ಆಸಕ್ತರಿಗೆ ನಮ್ಮ ಅಕಾಡೆಮಿ ವತಿಯಿಂದ ತರಬೇತಿ ನೀಡಲಾಗುವುದು ಎಂದರು.
ಸಭೆಯಲ್ಲಿದ್ದ ಇಸಿಹೆಚ್‍ಎಸ್ ಅಧಿಕಾರಿ, ಆರ್ಮಿ ಕ್ಯಾಂಟೀನ್ ವ್ಯವಸ್ಥಾಪಕರು, ಕೂಡಿಗೆ ಸೈನಿಕ ಶಾಲೆಯ ಅಧಿಕಾರಿ ಹಾಗೂ ಸೈನಿಕ ಮತ್ತು ಪುನರ್ ವಸತಿ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪಿಗೆ ಸಂಬಂಧಿಸಿದ ಮಾಹಿತಿಯನ್ನು ಮಾಜಿ ಯೋಧರಿಗೆ ನೀಡಿದರು.
ಸಮಸ್ಯೆಗಳನ್ನು ಹಂಚಿಕೊಂಡ ಮಾಜಿ ಯೋಧರು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಹೆಚ್ಚಿನ ಸಂಖ್ಯೆಯ ಮಾಜಿ ಯೋಧರು ಇಸಿಹೆಚ್‍ಎಸ್ ಮತ್ತು ಆರ್ಮಿ ಕ್ಯಾಂಟೀನ್’ನಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ಗಮನ ಸೆಳೆದರು.
ಕ್ಯಾಂಟೀನ್’ನಲ್ಲಿ 70 ವರ್ಷ ಮೇಲ್ಪಟ್ಟರಿಗೆ ಸಾಲಿನಲ್ಲಿ ನಿಂತು ವಸ್ತು ಖರೀದಿಸುವ ನಿಯಮದಿಂದ ರಿಯಾಯಿತಿ ನೀಡಿ ನೇರವಾಗಿ ಪಡೆಯಲು ಅವಕಾಶ ಕಲ್ಪಿಸಬೇಕು. ಕಣ್ಣು ನೋವು, ಹಲ್ಲು ನೋವಿಗೂ ಹೊರ ಊರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಬೇಕಾದ ಅನಿವಾರ್ಯತೆ ಇದೆ. ಇದರಿಂದ ವಯಸ್ಸಾದ ನಮಗೆ ಸಮಯ ಮತ್ತು ಹಣ ವ್ಯರ್ಥವಾಗುತ್ತಿದೆ. ವಿವಾಹ ಸಮಾರಂಭವಿದ್ದಾಗ ಕ್ಯಾಂಟೀನ್’ನಲ್ಲಿ ನಾವು ಕೇಳಿದ ಬ್ರಾಂಡ್’ನ ಮದ್ಯವನ್ನು ನೀಡಿ ಸಹಕರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಮನವಿ ಮಾಡಿದರು.
ಇಸಿಹೆಚ್‍ಎಸ್ ಅಧಿಕಾರಿ ಮಾತನಾಡಿ, ಕೊಡಗಿನಲ್ಲಿ ಎಲ್ಲಾ ಸೌಲಭ್ಯಗಳಿರುವ ಸೂಕ್ತ ಆಸ್ಪತ್ರೆಯ ಕೊರತೆ ಇದೆ. ಈ ಕಾರಣದಿಂದ ದೊಡ್ಡ ಸಮಸ್ಯೆಗಳಿದ್ದಾಗ ಮೈಸೂರು, ಬೆಂಗಳೂರು, ಮಂಗಳೂರಿಗೆ ರೋಗಿಗಳನ್ನು ಕಳುಹಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದ್ದು, ಸುಸಜ್ಜಿತ ಆಸ್ಪತ್ರೆಯ ಅವಶ್ಯಕತೆ ಇದೆ ಎಂದರು.
ಬಹುಮಾನ ವಿತರಣೆ: ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಮಡಿಕೇರಿ ತಂಡ ಪ್ರಥಮ ಮತ್ತು ಕುಶಾಲನಗರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಮಹಿಳೆಯರ ವಿಭಾಗದಲ್ಲಿ ಮಡಿಕೇರಿ ತಂಡ ಪ್ರಥಮ ಮತ್ತು ವೀರಾಜಪೇಟೆ ತಂಡ ದ್ವಿತೀಯ ಸ್ಥಾನ ಗಳಿಸಿತು.
ಅಂತರರಾಷ್ಟ್ರೀಯ ಮಟ್ಟದ ಪದಕ ವಿಜೇತ ಕ್ರೀಡಾಪಟು ಹಾಗೂ ಮಾಜಿ ಸೈನಿಕ ಹೆಚ್.ಎ.ಚಿನ್ನಪ್ಪ, ರಾಷ್ಟ್ರಮಟ್ಟದ ಪದಕ ವಿಜೇತ ಕ್ರೀಡಾಪಟು ಹಾಗೂ ಮಾಜಿ ಸೈನಿಕ ಬಾರನ ರಂಗನಾಥ್, ಮಡಿಕೇರಿ ತಾಲೂಕು ಅಧ್ಯಕ್ಷ ಪಿ.ಕುಟ್ಟಪ್ಪ, ಕೊಡಗು ಗೌಡ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ತಳೂರು ಕಾಳಪ್ಪ, ಸಂಚಾಲಕರಾದ ಸಿ.ಜಿ.ತಿಮ್ಮಯ್ಯ, ನಾಟೋಳಂಡ ಸೋಮಯ್ಯ ಮತ್ತಿತರರು ಉಪಸ್ಥಿತರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!