ಕರ್ನಾಟಕದಲ್ಲೇ ತಲೆಎತ್ತಲಿದೆ ದೇಶದ ಲೀಥಿಯಂ ಬ್ಯಾಟರಿ ತಯಾರಿಕೆಯ ಅತಿದೊಡ್ಡ ಕಾರ್ಖಾನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ರಾಜ್ಯದಲ್ಲಿ ಲಿಥಿಯಂ-ಐಯಾನ್ ಸೆಲ್ ಉತ್ಪಾದನೆಗಾಗಿ ₹6,000 ಸಾವಿರ ಕೋಟಿ  ಬಂಡವಾಳ ಹೂಡಿಕೆ ಮಾಡಲು ‌ಎಕ್ಸೈಡ್ ಇಂಡಸ್ಟ್ರೀಸ್ ಮುಂದೆ ಬಂದಿದೆ. ಈ ನಿಟ್ಟಿನಲ್ಲಿ ಗುರುವಾರ ಎಕ್ಸೈಡ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿದೇರ್ಶಕ  ಮತ್ತು ಸಿಇಒ ಸುಬೀರ್ ಚಕ್ರವರ್ತಿ ಅವರು,  ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್ ನಿರಾಣಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಇದು ದೇಶದಲ್ಲೇ ಅತಿದೊಡ್ಡ ಲಿಥಿಯಂ ಆಧರಿತ ಬ್ಯಾಟರಿ ಕೋಶಗಳನ್ನು ಉತ್ಪಾದಿಸುವ ಗಿಗಾ ಫ್ಯಾಕ್ಟರಿ ಆಗಲಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದರಿಂದ ರಾಜ್ಯದಲ್ಲಿ 1,200-1,400 ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ.

ಎಕ್ಸೈಡ್ ಇಂಡಸ್ಟ್ರೀಸ್ ಬೆಂಗಳೂರಿನ  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹರಳೂರು ಕೈಗಾರಿಕಾ ಪ್ರದೇಶದಲ್ಲಿ 80 ಎಕರೆ ಭೂಮಿಯನ್ನು ಕೋರಿದೆ.

ಕಂಪನಿಗೆ ಸರ್ಕಾರದ ಕಡೆಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ನಿರಾಣಿ ಭರವಸೆ ಇತ್ತಿದ್ದಾರೆ.

ಹಿನ್ನೆಲೆ

ಸ್ವಿಟ್ಜರ್ಲೆಂಡಿನ ಲೀಥಿಯಂ ಕೋಶಗಳ ಉತ್ಪಾದನಾ ಕಂಪನಿಯೊಂದರ ಜತೆ ಜಂಟಿ ಒಪ್ಪಂದ ಹೊಂದಿರುವ ಎಕ್ಸೈಡ್ ಅದಾಗಲೇ ಅಲ್ಲಿ ಕಾರ್ಖಾನೆ ತೆರೆಯುವಲ್ಲಿ ಪಾಲುದಾರನಾಗಿದೆ. ಅಲ್ಲದೇ, ಚೀನಾದ ಎಸ್ವೊಲ್ಟ್ ಎಂಬ ಲೀಥಿಯಂ ಬ್ಯಾಟರಿ ಉತ್ಪಾದನಾ ಸಂಸ್ಥೆ ಜತೆ ತಂತ್ರಜ್ಞಾನ ಸಹಕಾರದ ಒಪ್ಪಂದವನ್ನು ಹೊಂದಿರುವ ಎಕ್ಸೈಡ್ ಈ ದಿಸೆಯಲ್ಲಿ ಈಗಿನ ತಂತ್ರಜ್ಞಾನ ಅಳವಡಿಕೆಯ ಸಾಮರ್ಥ್ಯ ಹೊಂದಿದೆ. ಇತ್ತೀಚೆಗೆ ಕೇಂದ್ರ ಘೋಷಿಸಿರುವ ಉತ್ಪಾದನೆ ಆಧರಿತ ಉತ್ತೇಜನದ ಯೋಜನೆ ಅಡಿ ಪ್ರಸ್ತಾವವನ್ನೂ ಸಲ್ಲಿಸಿರುವ ಈ ಕಂಪನಿ, ‘ರಾಸಾಯನಿಕ ಕೋಶಗಳ ಮುಂದುವರಿದ ತಂತ್ರಜ್ಞಾನ ಮತ್ತು ಬ್ಯಾಟರಿ ಸಂಗ್ರಹ’ ವಿಭಾಗದಲ್ಲಿ ಯೋಜನೆಗಳನ್ನು ತರುವ ಬದ್ಧತೆ ಹೊಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!