October 26, 2026
Monday, October 26, 2026
spot_img

ದುಬಾರಿಯಾದ ಅಂಡರ್‌ ಗ್ರೌಂಡ್‌ ಮಾರ್ಗ : ಬೆಂಗಳೂರು ಮೆಟ್ರೋ ಪಿಂಕ್ ಲೈನ್ ವೆಚ್ಚ ದುಪ್ಪಟ್ಟು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಪಿಂಕ್‌ ಲೈನ್‌ ಮೆಟ್ರೋ ಯೋಜನೆಯ ವೆಚ್ಚ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಮೊದಲು ₹8,730 ಕೋಟಿ ಅಂದಾಜು ವೆಚ್ಚದಲ್ಲಿ ಪೂರ್ಣವಾಗಬೇಕಿದ್ದ ಪಿಂಕ್‌ ಲೈನ್‌ ಮೆಟ್ರೋ ಇದೀಗ ₹17,346 ಕೋಟಿಗೆ ಏರಿಕೆಯಾಗಿದೆ. ಮೂಲ ಅಂದಾಜಿಗಿಂತ ದುಪ್ಪಟ್ಟಾಗಿದೆ.

ಬೆಂಗಳೂರು ಮೆಟ್ರೋ ಪಿಂಕ್ ಲೈನ್ ಯೋಜನೆ ನಗರದ ದಕ್ಷಿಣ ಭಾಗದಿಂದ ಉತ್ತರ ಭಾಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 21.26 ಕಿಲೋಮೀಟರ್ ಉದ್ದದ ಈ ಮಾರ್ಗ ನಿರ್ಮಾಣವಾಗುತ್ತಿದೆ. ಇದರಲ್ಲಿ 13.76 ಕಿಲೋಮೀಟರ್ ಭೂಗತ ಮಾರ್ಗವಾಗಿದ್ದರೆ, 7.5 ಕಿಲೋಮೀಟರ್ ಎಲಿವೇಟೆಡ್ ಮಾರ್ಗವಾಗಿರಲಿದೆ. ಹಲವು ವರ್ಷಗಳ ವಿಳಂಬದ ಬಳಿಕವೂ ಕಾಮಗಾರಿ ಪೂರ್ಣಗೊಳ್ಳದಿರುವುದು ವೆಚ್ಚ ಹೆಚ್ಚಳದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. 2016ರಲ್ಲೇ ಪೂರ್ಣಗೊಳ್ಳಬೇಕಿದ್ದ ಯೋಜನೆಯ ಕಾಮಗಾರಿ 2020ರಲ್ಲಿ ಆರಂಭವಾಗಿದೆ.

ಪಿಂಕ್‌ಲೈನ್‌ ದುಬಾರಿಯಾಗುತ್ತಿರುವ ಕಾರಣ ಅಂಡರ್‌ ಗ್ರೌಂಡ್‌ ನಿರ್ಮಾಣವಾಗಿದೆ. ಇಲ್ಲಿ ಭೂಗತ ಮಾರ್ಗಕ್ಕೆ ₹13,876 ಕೋಟಿ ವೆಚ್ಚವಾಗುತ್ತಿದ್ದರೆ, ಎಲಿವೇಟೆಡ್ ಮಾರ್ಗದ ನಿರ್ಮಾಣಕ್ಕೆ ₹3,470 ಕೋಟಿ ವೆಚ್ಚವಾಗಲಿದೆ. ಈ ಅಂಕಿಅಂಶಗಳ ಪ್ರಕಾರ, ಭೂಗತ ಮಾರ್ಗದ ವೆಚ್ಚ ಪ್ರತಿ ಕಿಲೋಮೀಟರ್‌ಗೆ ₹1,000 ಕೋಟಿಗೂ ಅಧಿಕವಾಗಿದೆ. ಸುರಂಗ ಕೊರೆಯುವ ಯಂತ್ರಗಳ ಬಾಡಿಗೆ, ನಿರ್ಮಾಣ ಕಾಮಗಾರಿ ವಿಳಂಬ, ಕಾರ್ಮಿಕರ ಕೊರತೆ, ಎಲ್ಲ ವಸ್ತುಗಳ ಬೆಲೆ ಏರಿಕೆ ವೆಚ್ಚಕ್ಕೆ ಕಾರಣವಾಗಿದೆ.

ಇಷ್ಟೆಲ್ಲಾ ಖರ್ಚು ಮಾಡಿದ್ದರೂ ಹಲವು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

Must Read