ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಇಂದು ಘೋಷಣೆಯಾಗಿದೆ. ಮೇ 10ರಂದು ಒಂದೇ ಹಂತದಲ್ಲಿ 224ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದ್ದು, ಅದರ ಫಲಿತಾಂಶ ಮೇ 13ರಂದು ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ. ಚುನಾವಣೆ ಘೋಷಣೆ ಹಿನ್ನೆಲೆ ಇಂದಿನಿಂದಲೇ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಉಲ್ಲಂಘಿಸಿದ್ದಲ್ಲಿ ಯಾವುದೇ ನಾಯಕನದರೂ ಸರಿಯೇ ದಂಡ ತೆರಬೇಕಾಗುತ್ತದೆ.
ನೀತಿ ಸಂಹಿತೆ ಎಂದರೇನು?
ನೀತಿ ಸಂಹಿತೆಯ ಜಾರಿಯಾದ ಬಳಿಕ ಎಲ್ಲಾ ಪಕ್ಷಗಳು ಚುನಾವಣಾ ಆಯೋಗದ ರೀತಿ-ರಿವಾಜುಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾಗುತ್ತದೆ. ಇಸಿ ಆದೇಶವನ್ನು ಪಾಲಿಸದಿದ್ದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಹಕ್ಕು ಆಯೋಗಕ್ಕೆ ಇರುತ್ತದೆ. ಚುನಾವಣೆ ಮುಗುಯುವವರೆಗೆ ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ನಾಯಕರಿಗೆ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆಯೋಗ ಹೊರಡಿಸಿದ ಮಾರ್ಗಸೂಚಿಗಳನ್ನು ಚುನಾವಣಾ ಅಭ್ಯರ್ಥಿಗಳು ತಮ್ಮ ಭಾಷಣ, ಚುನಾವಣಾ ಪ್ರಚಾರದ ಜೊತೆಗೆ ಪ್ರಣಾಳಿಕೆಗಳಲ್ಲಿಯೂ ಅನುಸರಿಸಬೇಕಾಗುತ್ತದೆ.
ಯಾವುದಕ್ಕೆಲ್ಲಾ ಬೀಳಲಿದೆ ಬ್ರೇಕ್?
- ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ, ಸರ್ಕಾರ, ಆಡಳಿತ ಪಕ್ಷ, ವಿಪಕ್ಷಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಿಗಮ ಮಂಡಳಿಗಳು, ಸರ್ಕಾರದ ಎಲ್ಲಾ ಇಲಾಖೆಗಳಿಗೂ ನೀತಿ ಸಂಹಿತೆ ಅನ್ವಯಿಸುತ್ತದೆ.
- ನೀತಿ ಸಂಹಿತೆ ಜಾರಿಯಾದ ಬಳಿಕ ಸರ್ಕಾರದ ಯಾವುದೇ ಯೋಜನೆಗಳು ಜಾರಿಮಾಡುವಂತಿಲ್ಲ. ಈಗಾಗಲೇ ಇರುವ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮಾಡುವಂತಿಲ್ಲ.
- ಅಭ್ಯರ್ಥಿ ಮತದಾರರನ್ನು ಆಮಿಷಗಳಿಗೆ ಒಡ್ಡಿ ಪ್ರೇರೇಪಿಸುವಂತಿಲ್ಲ. ಹಣ, ಸೀರೆ, ಕುಕ್ಕರ್, ಪಾತ್ರೆಯಂತಹ ರೂಪದಲ್ಲಿ ಲಂಚ ನೀಡುವಂತಿಲ್ಲ.
- ಆಮಿಷವಷ್ಟೇ ಅಲ್ಲದೆ ಮತದಾರರನ್ನು ಬೆದರಿಸುವಂತೆಯೂ ಇಲ್ಲ. ಇಂತಹ ಕೆಲಸ ಮಾಡುವಾಗ ಸಿಕ್ಕಿಬಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಸಂಪೂರ್ಣ ಅಧಿಕಾರವಿರುತ್ತದೆ.
- ಚುನಾವಣಾ ಅಭ್ಯರ್ಥಿ ಧಾರ್ಮಿಕ, ಜಾತಿ ಭಾವನೆಗಳಿಗೆ ನೋವುಂಟು ಮಾಡುವ ಅಥವಾ ಪ್ರಚೋದಿಸುವ ಕೆಲಸ ಮಾಡುವಂತಿಲ್ಲ. ಜಾತಿ-ಧರ್ಮದ ಆಧಾರದ ಮೇಲೆ ಮತ ಬೇಡುವಂತಿಲ್ಲ.
- ಈಗಾಗಲೇ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಬೇಕು, ಸಭೆ-ಸಮಾರಂಭ ನಡೆಸುವುದಿದ್ದರೆ, ಪೊಲೀಸರ ಅನುಮತಿ ಕಡ್ಡಾಯ.
- ಅಭ್ಯರ್ಥಿಗಳು/ಮತದಾರರು ಚುನಾವಣಾ ಆಯೋಗದ ಮಾನ್ಯವಾದ ಪಾಸ್ ಪಡೆಯಬೇಕು. ಅಭ್ಯರ್ಥಿಗಳು ಬಳಸುವ ವಾಹನಗಳಿಗೂ ಪಾಸ್ ಮುಖ್ಯ.
- ಧ್ವನಿವರ್ಧಕ ಬಳಕೆಗೆ ಸಮಯ ನಿಗದಿ, ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಅನುಮತಿ ಪಡೆದಿರಬೇಕು.