ಮಾಲ್ಡೀವ್ಸ್’ನಲ್ಲಿ ಯೋಗ ದಿನಾಚರಣೆಗೆ ಅಡ್ಡಿಪಡಿಸಿದ ತೀವ್ರವಾದಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ವಿಶ್ವಶಾಂತಿಯ ಸಂದೇಶ ಸಾರುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಶಾಂತಿಯುತವಾಗಿ ಆಚರಿಸಲಾಗುತ್ತಿದೆ. ಆದರೆ ಭಾರತದ ನೆರೆಯ ರಾಷ್ಟ್ರವೇ ಆಗಿರುವ ಮಾಲ್ಡೀವ್ಸ್‌ನಲ್ಲಿ ಯೋಗ ದಿನಾಚರಣೆಗೆ ಧಕ್ಕೆಯುಂಟಾಗಿದೆ.

ಮಾಲ್ಡೀವ್ಸ್ ಯುವ ಮತ್ತು ಕ್ರೀಡಾ ಸಚಿವಾಲಯ ಮತ್ತು ಯುಎನ್ ಮಾಲ್ಡೀವ್ಸ್ ಸಹಭಾಗಿತ್ವದಲ್ಲಿ ಗಲೋಲ್ಹು ಕ್ರೀಡಾಂಗಣದಲ್ಲಿ ಭಾರತೀಯ ಮಿಷನ್ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಇಂದು ಬೆಳ್ಳಂ ಬೆಳಿಗ್ಗೆ ಕ್ರೀಡಾಂಗಣದಲ್ಲಿ ಯೋಗಾಸನದಲ್ಲಿ ಹಲವರು ತೊಡಗಿಸಿಕೊಂಡಿದ್ದರು. ಆದರೆ ಏಕಾಏಕಿ ತೀವ್ರಗಾಮಿಗಳ ಗುಂಪೊಂದು ಮೈದಾನಕ್ಕೆ ಲಗ್ಗೆಯಿಟ್ಟು ಶಾಂತಿಯುತವಾಗಿ ಯೋಗಾಸನ ಮಾಡುತ್ತಿದ್ದವರಿಗೆ ಅಡಿಪಡಿಸಿದೆ. ಉದ್ರಿಕ್ತರು ಯೋಗ ದಿನಾಚರಣೆಗೆಂದು ನೆರೆದಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಯೋಗಾಸನ ದಲ್ಲಿ ತೊಡಗಿದ್ದವರೆಲ್ಲರೂ ಸ್ಥಳದಿಂದ ಓಡಿಹೋಗಿದ್ದಾರೆ.

ಈ ಥರದ ಪ್ರತಿಭಟನೆ ನಡೆಯುತ್ತಿರುವುದು ಮಾಲ್ಡೀವ್ಸ್‌ನಲ್ಲಿ ಇದೇ ಹೊಸತೇನಲ್ಲ. ನೂತನ ಸೋಲೀಹ್‌ ಸರ್ಕಾರ ಬಂದಾಗಿನಿಂದ ಭಾರತ ವಿರೋಧಿ ಪ್ರತಿಭಟನೆಗಳು ಮಾಲ್ಡೀವ್ಸ್‌ನಲ್ಲಿ ನಿರಂತರವಾಗಿ ಜಾರಿಯಲ್ಲಿದೆ. ಡ್ರ್ಯಾಗನ್‌ ಚೀನಾ ಕುಮ್ಮಕ್ಕಿನಲ್ಲಿ ಅಲ್ಲಿನ ಕೆಲ ಸರ್ಕಾರದ ವಿರೋಧಿಗಳು “ಗೋ ಬ್ಯಾಕ್‌ ಇಂಡಿಯಾ” ಘೋಷಣೆಗಳ ಹೆರಿನಲ್ಲಿ ಭಾರತವನ್ನು ವಿರೋಧಿಸುತ್ತಿದ್ದಾರೆ. ಪ್ರಸ್ತುತ ಯೋಗ ದಿನಾಚರಣೆಯ ಮೇಲೆ ನಡೆದ ದಾಳಿ ಅದಕ್ಕೆ ಸೇರ್ಪಡೆಯಾದ ಹೊಸ ಉದಾಹರಣೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!