ಕುಕನೂರ ಮಹಾದೇವನೆದುರು ನೂರಾರು ಜನರಿಂದ ಯೋಗಾಭ್ಯಾಸ

ಹೊಸದಿಗಂತ ವರದಿ ಕೊಪ್ಪಳ :

ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಕುಕನೂರ ತಾಲ್ಲೂಕಿನ ಇಟಗಿ ಗ್ರಾಮದ ಶ್ರೀ ಮಹಾದೇವ ದೇವಸ್ಥಾನದ ಆವರಣದಲ್ಲಿಂದು ಹಮ್ಮಿಕೊಂಡಿದ್ದ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಹಾಗೂ ಆರ್ಟ್ ಆಫ್ ಲಿವಿಂಗ್ ಇವರ ಸಹಯೋಗದಲ್ಲಿ ಇಟಗಿ ಗ್ರಾಮದಲ್ಲಿ ಮಂಗಳವಾರದಂದು 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಯೋಗಾಭ್ಯಾಸ ನಂತರ ಡಿಸಿ ಮಾತನಾಡಿ, ವಿಕಾಸ್ ಕಿಶೋರ್ ಸುರಳ್ಕರ್ ಅವರು ಮಾತನಾಡಿ, ಪ್ರಾಚೀನ ಸಂಸ್ಕೃತಿಗೆ ನಮ್ಮ ದೇಶದ ಕೊಡುಗೆ ಅಪಾರವಾಗಿದ್ದು, ಯೋಗವು ಭಾರತದ ಭವ್ಯ ಪರಂಪರೆಯ ಒಂದು ಪ್ರತೀಕವಾಗಿದೆ. ಒತ್ತಡದ ನಡುವೆ ಬದುಕು ಸಾಗಿಸುವ ಇಂದಿನ ಜೀವನ ಶೈಲಿಗೆ ಯೋಗ ತುಂಬಾ ಅವಶ್ಯಕವಾಗಿ ಬೇಕಾಗಿದ್ದು, ಪ್ರತಿದಿನದ ಯೋಗಾಭ್ಯಾಸ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಲಿದೆ. ಆದ್ದರಿಂದ ಎಲ್ಲರೂ ಪ್ರತಿದಿನ ಅಥವಾ ವಾರದಲ್ಲಿ ಕನಿಷ್ಠ ಮೂರು ಬಾರಿಯಾದರೂ ಯೋಗವನ್ನು ಮಾಡಬೇಕು. ವಿಶೇಷವಾಗಿ ಮಕ್ಕಳು ತಮ್ಮ ಜೀವನದಲ್ಲಿ ಯೋಗವನ್ನು ಒಂದು ಹವ್ಯಾಸದ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು ಮಾತನಾಡಿ, ಮುಕ್ತ ಮನಸ್ಸಿನಿಂದ ಇಂದು ನಾವೆಲ್ಲರೂ ಯೋಗ ಮಾಡಿದ್ದೇವೆ. ಇದರಲ್ಲಿ ಮಕ್ಕಳು ಭಾಗಿಯಾಗಿರುವುದು ಸಂತೋಷ. ಯೋಗ ಆರೋಗ್ಯಕ್ಕೆ ತುಂಬಾ ಅವಶ್ಯಕವಾಗಿದ್ದು, ಯೋಗವನ್ನು ನಮ್ಮ ಜೀವನ ಶೈಲಿಯ ಭಾಗವನ್ನಾಗಿ ಅಳವಡಿಸಿಕೊಳ್ಳಬೇಕು. ಅಂತರಾಷ್ಟ್ರೀಯ ಯೋಗ ದಿನವಾದ ಇಂದು, ಯೋಗದ ಮಹತ್ವವನ್ನು ಅರಿತು, ಇತರರಿಗೆ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ವೈ.ಜೆ. ಶಿರವಾರ ಅವರು, ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಲಕನಂದಾ ಮಳಗಿ, ಗಣ್ಯರಾದ ನವೀನ ಗುಳಗಣ್ಣವರ್ ಸೇರಿದಂತೆ ಜಿಲ್ಲಾ ಆಯುಷ್ ಇಲಾಖೆ ಮತ್ತು ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿಗಳು, ವಿಧದ ಇಲಾಖೆಗಳ ಅಧಿಕಾರಿಗಳು, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯವರು, ಜನಪ್ರತಿನಿಧಿಗಳು ಶಿಕ್ಷಕರು, ಶಾಲಾ ಮಕ್ಕಳು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!