ಗದ್ದೆಯಲ್ಲಿ IPL ಸೆಟ್‌ ಹಾಕಿ ರಷ್ಯಾ ಬುಕಿಗಳಿಗೆ ಲಕ್ಷಾಂತರ ರು. ಪಂಗನಾಮ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಭಾರತದಲ್ಲಿ ಐಪಿಎಲ್‌ ಕ್ರೇಜ್‌ ಎಂತಹದ್ದು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ವರ್ಣರಂಜಿತ ಟೂರ್ನಿಯಲ್ಲಿ ವಿಶ್ವದ ಖ್ಯಾತನಾಮ ಕ್ರಿಕೆಟಿಗರು ಕಾಣಿಸಿಕೊಳ್ಳುತ್ತಾರೆ. ಹಾಗಾಗಿಯೇ ವಿಶ್ವಾದ್ಯಂತ ಐಪಿಎಲ್‌ ಕ್ರೇಜ್‌ ಹಬ್ಬಿದೆ. ಐಪಿಎಲ್‌ ಖ್ಯಾತಿಯೇ ಅದೆಷ್ಟೋ ಬೆಟ್ಟಿಂಗ್‌ ಸಂಸ್ಥೆಗಳಿಗೆ ಬಂಡವಾಳ. ಗುಜರಾತ್‌ ಪೊಲೀಸರು ಖತರ್ನಾಕ್‌ ಗ್ಯಾಂಗ್‌ ಒಂದನ್ನು ಬಂಧಿಸಿದ್ದಾರೆ. ಅದರೆ ಅವರು ಅಂತಿಂತ ಖದೀಮರಲ್ಲ, ಅವರು ಹಾಕಿದ್ದ ಮಾಸ್ಟರ್‌ ಪ್ಲಾನ್‌ ನೋಡಿದರೆ ನೀವು ಒಂದು ಕ್ಷಣ ದಂಗಾಗುತ್ತೀರಿ. ಕ್ರಿಕೆಟ್‌ ಗಂಧಗಾಳಿ ಗೊತ್ತಿಲ್ಲದ ಕೆಲ ರಷ್ಯಾ ಬುಕಿಗಳೂ ಐಪಿಎಲ್‌ ಮೇಲೆ ಕಣ್ಣಿಟ್ಟಿದ್ದರು. ಈ ವಿಚಾರವನ್ನೇ ಎನ್‌ಕ್ಯಾಶ್‌ ಮಾಡಿಕೊಂಡ ಈ ಖದೀಮರು ಗುಜರಾತ್‌ ನ ಗದ್ದೆಯೊಂದರಲ್ಲಿ ಐಪಿಎಲ್‌ ಸೆಟ್‌ ಸೃಷ್ಟಿಸಿ ರಷ್ಯಾದ ಬುಕ್ಕಿಗಳಿಗೆ ಲಕ್ಷಾಂತರ ರೂ ಪಂಗನಾಮ ಹಾಕಿದ್ದಾರೆ.
ಈ ಯೋಜನೆಯ ರೂವಾರಿ ಶೋಯಬ್‌ ದವಾಡ. ಈತ ಕೆಲದಿನಗಳ ಕಾಲ ರಷ್ಯಾದಲ್ಲಿ ಕೆಲಸ ಮಾಡಿದ್ದ. ಈ ವೇಳೆ ರಷ್ಯನ್ನರ ಬೆಟ್ಟಿಂಗ್‌ ದಂಧೆಯ ಸೀಕ್ರೆಟ್ ಗಳನ್ನು ತಿಳಿದುಕೊಂಡಿದ್ದ. ಆ ಬಳಿಕ ಭಾರತಕ್ಕೆ ಮರಳಿದವನೇ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮೋಲಿಪುರ್ ಗ್ರಾಮದಲ್ಲಿ ಗದ್ದೆಯೊಂದನ್ನು ಬಾಡಿಗೆಗೆ ಪಡೆದು ಹಾಲೋಜಿನ್ ಲೈಟ್‌ ಗಳನ್ನು ಅಳವಡಿಸಿ ಐಪಿಎಲ್‌ ಮಾದರಿಯ ಸೆಟ್‌ ಹಾಕಿದ್ದ. ಅಲ್ಲಿ ಗದ್ದೆ ಕೆಲಸಕ್ಕೆ ಹೋಗುತ್ತಿದ್ದ 21 ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡು ಆರ್ಸಿಬಿ, ಮುಂಬೈ, ಚೆನ್ನೈ ಸೇರಿದಂತೆ ವಿವಿಧ ಪ್ರಾಂಚೈಸಿ ಜೆರ್ಸಿ ಹಾಕಿಸಿ ಕ್ರಿಕೆಟ್‌ ಆಡಿಸಲಾಗುತ್ತಿತ್ತು.
ಅವರಿಗೆ ಪಂದ್ಯವೊಂದಕ್ಕೆ 400 ರೂ ಸಂಭಾವನೆ ನಿಗದಿ ಮಾಡಲಾಗಿತ್ತು. ಅವರಲ್ಲಿ ಒಬ್ಬಾತ ಪ್ರಸಿದ್ಧ ಕಾಮೆಂಟೇಟರ್ ಹರ್ಷಾ ಭೋಗ್ಲೆಯಂತೆ ವೇಷ ಧರಿಸಿ ಕಾಮೆಂಟೆರಿ ಕೊಡುತ್ತಿದ್ದ. ಪಂದ್ಯಗಳು ನೈಜವಾಗಿ ನಡೆಯುತ್ತಿವೆ ಎಂಬಂತೆ ಬಿಂಬಿಸಲು ಅಭಿಮಾನಿಗಳು ಕೂಗುವ ವಾಯ್ಸ್‌ ರೆಕಾರ್ಡ್‌ ಅನ್ನು ಡೌನ್ಲೋಡ್‌ ಮಾಡಿದ್ದಾರೆ. ಅಲ್ಲದೆ ಐದು ಎಚ್‌ಡಿ ಕ್ಯಾಮೆರಾಗಳ ಮೂಲಕ ಯೂಟ್ಯೂಬ್‌ ಹಾಗೂ ಟೆಲಿಗ್ರಾಮ್ ಚಾಲನೆಲ್‌ ಗಳಲ್ಲಿ ನೇರಪ್ರಸಾರ ಮಾಡಲಾಗುತ್ತಿತ್ತು. ರಷ್ಯಾ ಜೂಜುಕೋರರು ಇದು ನಿಜವಾದ ಐಪಿಎಲ್‌ ಎಂದು ನಂಬಿ ಲಕ್ಷಾಂತರ ರು. ಬೆಟ್ಟಿಂಗ್ ಕಟ್ಟಿದ್ದಾರೆ.
ಅಚ್ಚರಿಯೆಂದರೆ ಈ ನಕಲಿ ಪಂದ್ಯಾವಳಿಯು ಲೀಗ್‌ ಹಂತವನ್ನು ಪೂರೈಸಿ ನಾಕೌಟ್ ಹಂತವನ್ನು ತಲುಪಿತ್ತು. ಆರೋಪಿಗಳು ರಷ್ಯಾ ಬುಕ್ಕಿಗಳಿಂದ 3 ಲಕ್ಷ ರೂ ಗಳಿಗಿಂತ ಹೆಚ್ಚಿನ ಲಾಭವನ್ನು ರುಬೆಲ್‌ ರೂಪದಲ್ಲಿ ಗಳಿಸಿದ್ದರು. ಆ ವೇಳೆ ಪೊಲೀಸರು ಅದನ್ನು ಟ್ರ್ಯಾಕ್ ಮಾಡಿದ್ದಾರೆ. ಹಾಗೂ ನಕಲಿ ಐಪಿಎಲ್ ನ ನಾಲ್ವರು ರೂವಾರಿಗಳನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!