ಕಾಂಗ್ರೆಸ್ ಸರ್ಕಾರ ಪತನ: ಬಿಜೆಪಿ, ಜೆಡಿಎಸ್‌ನವರು ಹಗಲು ಕನಸು ಕಾಣುತ್ತಿದ್ದಾರೆ ಎಂದ ಸಚಿವ ಶಿವರಾಜ ತಂಗಡಗಿ

ಹೊಸದಿಗಂತ ವರದಿ,ಮೈಸೂರು:

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿ, ಜೆಡಿಎಸ್‌ನವರು ಹಗಲು ಕನಸು ಕಾಣುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಲೇವಡಿ ಮಾಡಿದರು.

ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ 135 ಮಂದಿ ಶಾಸಕರಿದ್ದಾರೆ. ಸರ್ಕಾರ ಸುಭದ್ರವಾಗಿದೆ. ಹೀಗಿದ್ದರೂ ಬಿಜೆಪಿಯವರು, ಜೆಡಿಎಸ್‌ನವರು ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹಗಲು ಕನಸು ಕಾಣುತ್ತಿದ್ದಾರೆ. ನಮ್ಮ ಸರ್ಕಾರ ಸುಭದ್ರವಾಗಿದೆ, ಜನರಿಗೆ ಒಳ್ಳೆಯ ಆಡಳಿತ ಕೊಡುತ್ತೇವೆ.ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯವರಿಗೆ ಜನ ಹೇಗೆ ಉತ್ತರ ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದೇ ರೀತಿ ಲೋಕಸಭೆ ಚುನಾವಣೆಯಲ್ಲು ಉತ್ತರ ಕೊಡುತ್ತಾರೆ ಎಂದರು.

ರಾಜ್ಯ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳ ಕಡೆಗಣನೆ ಮಾಡಲಾಗಿದೆ ಎಂಬುದು ಸುಳ್ಳು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದಲ್ಲಿ ಜಾತಿವಾರು ಅಧಿಕಾರಿಗಳನ್ನ ಹಾಕಲು ಸಾಧ್ಯವಿಲ್ಲ. ಶಾಸಕ ಶಾಮನೂರು ಶಿವಶಂಕರಪ್ಪರ ಮಾತಿಗೆ ಮನ್ನಣೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.

ಲೋಕಸಭಾ ಚುನಾವಣೆಗೆ ಒಂದು ವರ್ಷವಿದೆ. ಚುನಾವಣೆ ಬಂದ ತಕ್ಷಣ ಬಿಜೆಪಿಯವರಿಗೆ ಹಿಂದುಗಳು ನೆನಪಾಗ್ತಾರೆ. ಚುನಾವಣೆ ಬಂದಾಗಲೇ ಇವರಿಗೆ ಪಾಕಿಸ್ತಾನ, ಮುಸ್ಲಿಂ, ಗಣೇಶ, ಮಸೀದಿ, ಆಂಜನೇಯ ನೆನಪಾಗುತ್ತಾ. ಬಿಜೆಪಿ ಅವಧಿಯಲ್ಲಿ ಹತ್ಯೆಗಳು ನಡೆದಿಲ್ಲವೇ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮಾತ್ರ ಹಿಂದುಗಳ ಹತ್ಯೆ ನಡೆಯುತ್ತಿದೆ ಎಂದು ಬಿಜೆಪಿಯವರು ಆರೋಪಿಸುತ್ತಿರುವುದು
ಚುನಾವಣಾ ಗಿಮಿಕ್, ವಿಧಾನಸಭಾ ಚುನಾವಣೆಯಂತೆ ಲೋಕಸಭೆ ಚುನಾವಣೆಯಲ್ಲೂ ಜನ ಬಿಜೆಪಿಯವರಿಗೆ ಪಾಠ ಕಲಿಸುತ್ತಾರೆ. ಶಿವಮೊಗ್ಗ ಗಲಾಟೆ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.ತಪ್ಪಿತಸ್ತರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ದೇಶದ್ಯಾoತ ಜಾತಿ ಗಣತಿ ವರದಿ ಬಿಡುಗಡೆ ಮಾಡಬೇಕು; ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದ ಅವಧಿಯಲ್ಲಿ 160 ಕೋಟಿ ರೂ ಖರ್ಚು ಮಾಡಿ, ಜಾತಿ ಗಣತಿಯನ್ನು ಮಾಡಿಸಲಾಗಿದೆ. ಅದರ ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಕಾಲ ಬಂದಾಗ ಸರ್ಕಾರ ಈ ವರದಿಯನ್ನು ಬಿಡುಗಡೆ ಮಾಡುತ್ತದೆ. ಕೇಂದ್ರ ಸರ್ಕಾರ ದೇಶದ್ಯಾಂತ ನಡೆಸಿರುವ ಜಾತಿ ಗಣತಿಯ ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಈಬಾರಿಯ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಉತ್ತರ ಕರ್ನಾಟಕದ ಜಾನಪದ ಕಲಾತಂಡಗಳಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತದೆ. ಆ ಮೂಲಕ ಉತ್ತರ ಕರ್ನಾಟಕದ ಕಲೆ, ಸಂಸ್ಕೃತಿಗಳ ಪ್ರದರ್ಶನಕ್ಕೂ ನೀಡಲಾಗುತ್ತದೆ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮೈಸೂರಿನ ರಂಗಾಯಣಕ್ಕೆ ಶೀಘ್ರದಲ್ಲೇ ನಿರ್ದೇಶಕರನ್ನು ನೇಮಕ ಮಾಡಲಾಗುವುದು, ಬೇಕಾದ ಅನುದಾನವನ್ನು ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!