Sunday, December 3, 2023

Latest Posts

ಚಿಕ್ಕಬಳ್ಳಾಪುರದಲ್ಲಿ ಶೌರ್ಯ ಜಾಗರಣ ರಥಯಾತ್ರೆಗೆ ಚಾಲನೆ

ಹೊಸದಿಗಂತ ವರದಿ, ಚಿಕ್ಕಬಳ್ಳಾಪುರ:

ಧರ್ಮರಕ್ಷಣೆಯ ಉದ್ದೇಶವನ್ನಿಟ್ಟುಕೊಂಡು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷದ್ ಮತಾಂತರ ತಡೆ, ಗೋರಕ್ಷಣೆ, ಸಾಮರಸ್ಯ, ಶತಮಾನಗಳಿಂದ ದುಷ್ಟರ ಆಡಳಿತ ಕಾಲದಲ್ಲಿ ಹಿಂದುಗಳ ದಮನಕ್ಕಾಗಿ ಮಾಡಿದ ಕಾರ್ಯಗಳನ್ನು ಸರಿಪಡಿಸುತ್ತಾ, ಸಮಸ್ತ ಹಿಂದು ಸಮಾಜವನ್ನು ಸಂಘಟಿಸುತ್ತಾ ಬಂದಿದೆ ಎಂದು ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ತಿಳಿಸಿದರು.

ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಜೂನಿಯರ್ ಕಾಲೇಜು ಸಭಾಂಗಣದಿಂದ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದಿಂದ ಶೌರ್ಯ ಜಾಗರಣ ರಥಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

1964 ರಲ್ಲಿ ಮುಂಬೈಯ ಸಾಂದೀಪನಿ ಆಶ್ರಮದಲ್ಲಿ ಸ್ಥಾಪನೆಗೊಂಡ ವಿಶ್ವಹಿಂದೂ ಪರಿಷದ್ ಷಷ್ಠಿಪೂರ್ತಿ ವರ್ಷವನ್ನು ಆಚರಿಸುವ ಸಂದರ್ಭದಲ್ಲಿ ದೇಶದಲ್ಲಿ ಹಿಂದುಗಳಿಗೋಸ್ಕರ ಶ್ರೀರಾಮ ಜನ್ಮಭೂಮಿ ಆಂದೋಲನ, ರಾಮಸೇತು ಉಳಿಸಿ ಆಂದೋಲನ, ತಿರುಪತಿ ಉಳಿಸಿ ಹೋರಾಟ, ಅಮರನಾಥ ಹೋರಾಟ ಯಶಸ್ವಿಯಾಗಿ ನಡೆಸಿ ಹಿಂದು ಸಮಾಜಕ್ಕೆ ಶಕ್ತಿ ತುಂಬಿದೆ.ಹಿಂದುಗಳಿಗಾದ ಅಪಮಾನ ತೊಡೆದು ಹಾಕುವ ಮೊದಲ ಹೆಜ್ಜೆಯಾಗಿ ಪ್ರಭು ಶ್ರೀರಾಮಚಂದ್ರನ ಜನ್ಮಸ್ಥಾನದಲ್ಲಿ ದುಷ್ಟರು ರಚಿಸಿದ ಕಳಂಕಿತ ಕಟ್ಟಡವನ್ನು ರಾಮಭಕ್ತರು ಶೌರ್ಯ ಪ್ರದರ್ಶನದ ಮೂಲಕ ಡಿಸೆಂಬರ್ 6,1992ರಂದು ಕೆಡವಿ ಹಾಕಿ ಇತಿಹಾಸ ನಿರ್ಮಿಸಿದೆ ಎಂದರು.

ಇದೀಗ ಮತ್ತೆ ಹಿಂದು ಧರ್ಮ ವೈಭವದ ಪುನರುತ್ಥಾನದ ಸಂಕೇತವಾಗಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮತ್ತೆ ಭವ್ಯ ರಾಮಮಂದಿರ ನಿರ್ಮಾಣವಾಗಿ ಇದೇ ಜನವರಿ 2024ರಲ್ಲಿ ರಾಮನ ಪ್ರಾಣ ಪ್ರತಿಷ್ಠೆಯಾಗಲಿದೆ. ಹಿಂದು ಧರ್ಮ ವೈಭವಯುತ ಚರಿತ್ರೆ, ಶೌರ್ಯಯುತ ಇತಿಹಾಸ ಹಿಂದು ಸಮಾಜಕ್ಕೆ ತಿಳಿಸುತ್ತಾ ಹಿಂದು ಧರ್ಮಕ್ಕೆ ರಾಷ್ಟ್ರಾದ್ಯಾಂತ ದುಷ್ಟರು ಮಾಡಿದ ಕಳಂಕ ತೊಡೆದು ಹಾಕಲು ಹಾಗೂ ಹಿಂದು ಧರ್ಮವನ್ನು ನಿರ್ಭೀತಿಯಿಂದ ಎಲ್ಲಾ ಕಡೆ ಆಚರಿಸುವಂತಾಗಲು ಹಿಂದು ಸಮಾಜದಲ್ಲಿರುವ ಶೌರ್ಯವನ್ನು ಜಾಗರಣೆ ಮಾಡಿ ಬಲಿಷ್ಟ ಸಮಾಜ – ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ಶೌರ್ಯ ಜಾಗರಣ ರಥಯಾತ್ರೆಯನ್ನು ರಾಷ್ಟ್ರಾದ್ಯಂತ ಹಮ್ಮಿಕೊಂಡಿದ್ದು, ಶೋಭಕೃತ ನಾಮ ಸಂವತ್ಸರದ ಭಾದ್ರಪದ ಮಾಸದ ಶುಕ್ಲಪಕ್ಷ ದಶಮಿಯಿಂದ ಭಾದ್ರಪದ ಮಾಸ ಕೃಷ್ಣಪಕ್ಷ ಏಕಾದಶಿಯವರೆಗೆ (ದಿನಾಂಕ 25-09-2023 ರಿಂದ 10-10-2023ರವರಿಗೆ) ನಡೆಯಲಿದೆ. ಅದರ ಭಾಗವಾಗಿ ಕರ್ನಾಟಕದಲ್ಲಿ ಶೌರ್ಯ ಜಾಗರಣ ರಥಯಾತ್ರೆ ನಡೆಯಲಿದೆ ಎಂದರು.

ಬಜರಂಗದಳ ಜಿಲ್ಲಾ ಸಂಚಾಲಕ ಜಿ.ಎ.ಅಮರೇಶ್ ಮಾತನಾಡಿ, ವಿಶ್ವ ಹಿಂದೂ ಪರಿಷದ್ ಯುವಪೀಳಿಗೆಯ ಶೌರ್ಯವನ್ನು ಸಮಾಜಕ್ಕೆ ಉಪಯೋಗಿಸುವಂತಾಗಲು ಬಜರಂಗದಳ ಹಾಗೂ ದುರ್ಗಾ ವಾಹಿನಿ ಪ್ರಾರಂಭಿಸಿದೆ. ಗೋವುಗಳನ್ನು ಕಟುಕರಿಂದ ರಕ್ಷಿಸಿ, ಅಕ್ರಮ-ಸಾಗಾಟದಲ್ಲಿ ಹಿಂಸೆಯನ್ನು ತಡೆದು, ಕಾನೂನಾತ್ಮಕ ಹೋರಾಟದಿಂದ ಲಕ್ಷಾಂತರ ಗೋವುಗಳನ್ನು ಕಟುಕರಿಂದ ರಕ್ಷಿಸಿ ಉಳಿಸಿದ್ದು ಅವುಗಳ ಆಶೀರ್ವಾದ ಬಲದಿಂದ ಇನ್ನಷ್ಟು ಶೌರ್ಯವೃದ್ಧಿ ಮಾಡುತ್ತಾ ಸಮಾಜಕ್ಕೆ ಅನ್ಯರಿಂದ ಬರುತ್ತಿರುವ ಕಿರುಕುಳಗಳಾದ ಲವ್ ಜಿಹಾದ್‌, ಲ್ಯಾಂಡ್ ಜಿಹಾದ್ ಇತ್ಯಾದಿಗಳ ವಿರುದ್ಧ ಹೋರಾಟ ಮಾಡಿ ಹಿಂದುಗಳು ನಿರ್ಭಯವಾಗಿ ತಮ್ಮಧರ್ಮ ಆಚರಣೆಗೆ ವಾತಾವರಣ ನಿರ್ಮಾಣ ಮಾಡಲು ತೊಡಗಿಕೊಂಡಿವೆ ಎಂದರು.

ಕಾರ್ಯಕ್ರಮದಲ್ಲಿ ಸೂರಪ್ಪಲ್ಲಿ ಆನಂದಮಠದ ನರೋತ್ತಮಾನಂದ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ನ ತುಮಕೂರು ವಿಭಾಗ ಕಾರ್ಯದಾರ್ಶಿ ಗೌರಿಶಂಕರ, ಜಿಲ್ಲಾಧ್ಯಕ್ಷ ಡಾ ಬಿ ಕೆ ಮಂಜುನಾಥ್, ಕಾರ್ಯಾಧ್ಯಕ್ಷ ಡಾ ಬಿ ವಿ ಮಂಜುನಾಥ, ಜಿಲ್ಲಾ ಕಾರ್ಯದರ್ಶಿ ಎಂ ಎನ್ ಬಾಲಕೃಷ್ಣ, ಸಹ ಕಾರ್ಯದರ್ಶಿ ಉಪೇಂದ್ರ, ಜಿಲ್ಲಾ ಉಪಾಧ್ಯಕ್ಷ ಸಾಗನಹಳ್ಳಿ ಶಿವಕುಮಾರ, ಉಪೇಂದ್ರ, ಗೌರಿಬಿದನೂರು ಅಧ್ಯಕ್ಷ ರಮೇಶ್, ಚಿಂತಾಮಣಿ ಅಧ್ಯಕ್ಷ ಅರುಣ್, ಗುಡಿಬಂಡೆ ಅಧ್ಯಕ್ಷ ಶ್ರೀನಾಥ್, ಬಜರಂಗದಳ ಸಹ ಸಂಚಾಲಕ ಕಾರ್ತಿಕ್, ಗಂಗೆಶ, ಚಂದನ್, ಮನೋಜ್, ಅಭಿ, ಮುರಳಿ, ಬಾಗೇಪಲ್ಲಿ ಸುಧಾಕರ್ ಸೇರಿದಂತೆ ಹಲವರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!