August 10, 2026
Monday, August 10, 2026
spot_img

ಜಮೀನಿನಲ್ಲಿ ಐದು ಲಕ್ಷ ರೂಪಾಯಿ ಹೂತುಹಾಕಿದ್ದ ರೈತ, ಎಲ್ಲವೂ ಗೆದ್ದಲು ಪಾಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಜಮೀನಿನಲ್ಲಿ ಹೂತುಹಾಕಿದ್ದ ರೈತನೊಬ್ಬನಿಗೆ ಭಾರೀ ಆಘಾತವಾಗಿದೆ. ಮನೆಯವರಿಗೆ ತಿಳಿಯಬಾರದು ಎಂದು ಹಣವನ್ನು ಜಮೀನಿನಲ್ಲಿ ಹೂತು ಹಾಕಿದ್ದು, ಹಣವೆಲ್ಲಾ ಗೆದ್ದಲಿನ ಪಾಲಾದ ಘಟನೆ ರಾಜಸ್ಥಾನದ ಬಾಲೋತ್ರಾ ಜಿಲ್ಲೆಯ ಪಚಪದ್ರಾದಲ್ಲಿ ನಡೆದಿದೆ.

ರೈತ ರಂಗು ಅಲಿಯಾಸ್‌ ಮಾಂಗಿಲಾಲ್‌ ಮೇಘವಾಲ್‌ ತನ್ನ ಜಮೀನಿನಲ್ಲಿ ಶೆಡ್‌ ನಿರ್ಮಾಣ ಮಾಡಿಸಲು ಐದು ಲಕ್ಷ ರೂಪಾಯಿ ನಗದನ್ನು ಕೂಡಿಸಿ ಇಟ್ಟಿದ್ದರು. ಹಣ ಕಳವಾಗಬಾರದು ಅಥವಾ ಮನೆಯವರು ಬೇರೆ ಕಾರಣಗಳಿಗೆ ಹಣ ಬಳಸಬಾರದು ಎಂದು ನಗದನ್ನು ಪ್ಲಾಸ್ಟಿಕ್‌ಕವರ್‌ನಲ್ಲಿ ಸುತ್ತಿ ಭೂಮಿಯನ್ನು ಅಗೆದು ಅದರೊಳಗೆ ಹಾಕಿದ್ದಾರೆ.

ಮರೆವು ಕಾಯಿಲೆಯಿಂದ ಎಲ್ಲವೂ ಹಾಳು

ಮರೆವಿನ ಕಾಯಿಲೆಯಿಂದ ಬಳಲುತ್ತಿರುವ ಮಾಂಗಿಲಾಲ್‌ ಅವರಿಗೆ ತಾವು ಹಣವನ್ನು ಜಮೀನಿನಲ್ಲಿ ಹೂತು ಹಾಕಿದ್ದೇವೆ ಎನ್ನೋದು ನೆನಪಿತ್ತು. ಆದರೆ ಎಲ್ಲಿ ಎನ್ನೋದನ್ನು ಮರೆತುಹೋಗಿದ್ದರು. ಹತ್ತು ಕಡೆ ಜಮೀನನ್ನು ಅಗೆದರೂ ಹಣ ಸಿಗಲಿಲ್ಲ. ನಂತರ ಅನಿವಾರ್ಯವಾಗಿ ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ. ಅವರೆಲ್ಲರೂ ಕೂಡಿ ಹುಡುಕಿದರೂ ಹಣ ಕಾಣಿಸಿಲ್ಲ.

ಉಳುಮೆ ಮಾಡುವಾಗ ಮೇಲೆ ಬಂದ ಪ್ಲಾಸ್ಟಿಕ್‌ ಚೀಲ

ಇತ್ತೀಚೆಗೆ ಮಳೆಗಾಲದ ಹಿನ್ನೆಲೆಯಲ್ಲಿ ಜಮೀನನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವಾಗ ಪ್ಲಾಸ್ಟಿಕ್ ಚೀಲ ಮೇಲಕ್ಕೆ ಬಂದಿದೆ. ಮರುದಿನ ಬೆಳಿಗ್ಗೆ ಜಮೀನಿಗೆ ಹೋದಾಗ ಪ್ಲಾಸ್ಟಿಕ್ ಬ್ಯಾಗ್ ಸಿಕ್ಕಿದ್ದು, ಅದನ್ನು ತೆರೆದು ನೋಡಿದಾಗ ಒಳಗಿದ್ದ 5 ಲಕ್ಷ ರೂ. ಮೌಲ್ಯದ ನೋಟುಗಳನ್ನು ಗೆದ್ದಲುಗಳು ಸಂಪೂರ್ಣವಾಗಿ ತಿಂದಿರುವುದು ಕಂಡುಬಂದಿದೆ. ಎಲ್ಲ ಕಡೆ ತೂತು, ಎಲ್ಲ ಕಡೆ ನೋಟುಗಳು ಹರಿದು ಹೋಗಿವೆ.

ಸ್ಥಿತಿ ಹಾಳಾಗಿದೆ, ಬದಲಾಯಿಸಿಕೊಳ್ಳಲು ಆಗೋದಿಲ್ಲ

ಸಂಪೂರ್ಣ ಹಾಳಾಗಿದ್ದ ನೋಟುಗಳನ್ನು ತೆಗೆದುಕೊಂಡು ಕುಟುಂಬಸ್ಥರು ಪಚಪದ್ರಾ ಎಸ್‌ಬಿಐ (SBI) ಶಾಖೆಗೆ ಹಾಗೂ ನಂತರ ಬಾಲೋತ್ರಾದ ಮುಖ್ಯ ಶಾಖೆಗೆ ತೆರಳಿದರು. ಆದರೆ, ನೋಟುಗಳ ಸ್ಥಿತಿ ತೀರಾ ಕೆಟ್ಟದಾಗಿದ್ದರಿಂದ ಸ್ಥಳೀಯ ಬ್ಯಾಂಕ್‌ಗಳು ಅವುಗಳನ್ನು ಸ್ವೀಕರಿಸಲು ನಿರಾಕರಿಸಿವೆ. ಇತ್ತ ಜೈಪುರದಲ್ಲಿರುವ ರಿಸರ್ವ್‌ ಬ್ಯಾಂಕ್‌ ಅಥವಾ ಎಸ್‌ಬಿಐ ಮುಖ್ಯ ಖಾತೆಗೆ ಹೋಗಿ ನೋಡಿ ಅಲ್ಲಿ ಬದಲಾಯಿಸಿ ಕೊಡಬಹುದು ಎಂದು ಸಿಬ್ಬಂದಿ ಸಲಹೆ ನೀಡಿದ್ದಾರೆ. ಆದರೆ ಅಷ್ಟು ದೂರ ಪ್ರಯಾಣ ಮಾಡಲು ಹಣವಿಲ್ಲದೆ ಕುಟುಂಬ ಕಣ್ಣೀರಿಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !