ಹೊಸದಿಗಂತ ವರದಿ, ಬಳ್ಳಾರಿ:
ಕೈಗಾರಿಕೆ ಘಟಕಗಳನ್ನು ಸ್ಥಾಪಿಸಿ, ಉದ್ಯೋಗ ನೀಡಿ, ಇಲ್ಲವೇ ವಶಪಡಿಸಿಕೊಂಡ ಜಮೀನನ್ನು ವಾಪಸ್ಸು ನೀಡಬೇಕು ಎಂದು ಒತ್ತಾಯಿಸಿ ಕುಡುತಿನಿ ಪಟ್ಟಣದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ 84ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ 12ವರ್ಷಗಳ ಹಿಂದೆ ಕುಡುತಿನಿ, ವೇಣಿ ವೀರಾಪೂರ್, ಸಿದ್ದಮ್ಮನಹಳ್ಳಿ, ಜಾನೆಕುಂಟೆ, ಹರಗಿನದೋಣಿ, ಕೊಳಗಲ್, ಯರ್ರಂಗಳಿ ಸೇರಿದಂತೆ ವ್ಯಾಪ್ತಿಯ ನಾನಾ ಕಡೆ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಸರ್ಕಾರ ರೈತರಿಂದ ಸಾವಿರಾರು ಎಕರೆ ಭೂಮಿಯನ್ನು ವಶಕ್ಕೆ ಪಡೆದಿದೆ. ಆದರೇ, ರೈತರ ಒಪ್ಪಂದದಂತೆ ಘಟಕಗಳು ನಿಗಧಿತ ಅವಧಿಯಲ್ಲಿ ನಿರ್ಮಾಣಗೊಂಡಿಲ್ಲ, ನೀಡಿದ ಉದ್ಯೋಗ ಭರವಸೆ ಕನಸಾಗಿದೆ, ವರ್ಷದಿಂದ ವರ್ಷಕ್ಕೆ ಜಮೀನುಗಳ ಬೆಲೆ ಏರಿಕೆಯಾಗುತ್ತಿದ್ದರೂ ಘಟಕಗಳ ಸ್ಥಾಪನೆ ಯಾದರೇ ನಮ್ಮ ಬಳ್ಳಾರಿ ಅಭಿವೃದ್ಧಿ ಜೊತೆಗೆ ನಮ್ಮಮಕ್ಕಳಿಗೆ ಶಾಶ್ವತ ಉದ್ಯೋಗ ದೊರೆಯಲಿದೆ ಎಂದು ಜಮೀನುಗಳನ್ನು ನಿಡಿದ್ದೇವೆ. ಆದರೇ, ಇಲ್ಲಿವರೆಗೂ ಘಟಕಗಳು ನಿರ್ಮಾಣಗೊಂಡಿಲ್ಲ, ಕೂಡಲೇ ನಮ್ಮಜಮೀನು ನಮಗೆ ವಾಪಸ್ಸು ನೀಡಿ, ಇಲ್ಲವೇ ಘಟಕಗಳನ್ನು ಕೂಡಲೇ ಸ್ಥಾಪಿಸಿ ನಮಗೆ ಉದ್ಯೋಗ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.