ರೈತರ ಕಲ್ಯಾಣ ಬಿಜೆಪಿ ಸರ್ಕಾರದ ಆದ್ಯ ಗುರಿ: ನಳಿನ್ ಕುಮಾರ್ ಕಟೀಲ್

ಹೊಸದಿಗಂತ ವರದಿ, ಬೆಂಗಳೂರು:
ಬಿಜೆಪಿ ಸರ್ಕಾರವು ಆದ್ಯತೆಯ ಮೇರೆಗೆ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರಕಾರ ಆರು ಸಾವಿರ ಹಾಗೂ ರಾಜ್ಯ ಸರ್ಕಾರ 4 ಸಾವಿರ ರೂಗಳ ನೆರವನ್ನು ರೈತರ ಖಾತೆಗೆ ಜಮಾ ಮಾಡುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಆಯೋಜಿಸಿದ್ದ ʼರೈತ ಉತ್ಪಾದಕ ಸಂಸ್ಥೆಗಳಿಗೆ ಮಾರುಕಟ್ಟೆ ಅವಕಾಶಗಳುʼ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲಾಗುತ್ತಿದೆ. ರಾಜ್ಯದಲ್ಲಿ 1,093 ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್‍ಪಿಒ) ರಚಿಸಲಾಗಿದೆ ಎಂದು ತಿಳಿಸಿದರು.
ಎಫ್‍ಪಿಒಗಳಿಗೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳಿಂದ ಒಟ್ಟು ಸುಮಾರು 80 ಲಕ್ಷ ರೂಪಾಯಿ ನೀಡಲಾಗುತ್ತಿದೆ. ರೈತರ ವಾರ್ಷಿಕ ಆದಾಯವನ್ನು ದುಪ್ಪಟ್ಟುಗೊಳಿಸುತ್ತ ಪ್ರಧಾನಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ತಿಳಿಸಿದರು.
ಕುರಿ, ಮೇಕೆ, ಕೋಳಿ, ಮೀನು ಸಾಕಣೆಗೆ 87 ಲಕ್ಷ ಸಾಲ ನೀಡಿ ಅದರಲ್ಲಿ 50 ಲಕ್ಷ ರೂಪಾಯಿ ಸಬ್ಸಿಡಿ ಕೊಡುವ ಯೋಜನೆ ಜಾರಿಯಲ್ಲಿದೆ. ಕೃಷಿಗೆ ಆದ್ಯತೆ ಕೊಡುವ ಅದ್ಭುತ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಹೇಳಿದರು.
ನರೇಂದ್ರ ಮೋದಿಯವರು ರೈತರಿಗಾಗಿ ಫಸಲ್ ಬಿಮಾ ಯೋಜನೆ ಜಾರಿ ಮಾಡಿ, ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗಳಿಗೆ ನೇರವಾಗಿ ಹಣ ಹಾಕಿದ ಮೊದಲ ಪ್ರಧಾನಿ. ರೈತರ ಉತ್ಪನ್ನ ಶೇಖರಣೆಗೆ ಜಿಲ್ಲೆಗೊಂದು ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಅವರು ಆದ್ಯತೆ ಕೊಟ್ಟಿದ್ದಾರೆ. ಬೊಮ್ಮಾಯಿ ಅವರ ಸರಕಾರವು ರೈತ ಸಮುದಾಯದ ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಹಾಲು ಉತ್ಪಾದಕರಿಗಾಗಿ ಬ್ಯಾಂಕ್ ನಿರ್ಮಿಸಿದ್ದು, ಇವೆರಡು ಯೋಜನೆಗಳೂ ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಂಡಿವೆ ಎಂದು ಮಾಹಿತಿ ನೀಡಿದರು. ಯಡಿಯೂರಪ್ಪ ಅವರ ಸರಕಾರ ಹಾಲಿಗೆ 4 ರೂಪಾಯಿ ಬೆಂಬಲ ಬೆಲೆ ನೀಡಿ ಹೈನುಗಾರರನ್ನು ಪ್ರೋತ್ಸಾಹಿಸಿದೆ ಎಂದು ವಿವರಿಸಿದರು.
ಯಂತ್ರೋಪಕರಣಗಳಿಗೆ ಸಹಾಯಧನ- ಸಹಕಾರ, ಮಾರ್ಗದರ್ಶನ ನೀಡಲಾಗುತ್ತಿದೆ. ರೈತರು ಪ್ರಯೋಗಶೀಲರಾಗಬೇಕು ಎಂದು ನಳೀನ್‌ ಕುಮಾರ್ ಕಟೀಲ್‌ ಕರೆನೀಡಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ರೈತರಿಗೆ ಉತ್ತಮವೆನಿಸುವ ಕಾರ್ಯಕ್ರಮಗಳ ಕುರಿತು ತಿಳಿಸಿ ರೈತರಲ್ಲಿ ಭರವಸೆ ತುಂಬುವ ಕಾರ್ಯವನ್ನು ರೈತ ಮೋರ್ಚಾ ಮಾಡುತ್ತಿದೆ. ನಮ್ಮ ಸರಕಾರ ಯೋಜನೆಗಳ ಬಗ್ಗೆ ಕೇವಲ ಮಾತನಾಡುವುದಿಲ್ಲ. ಯೋಜನೆಗಳನ್ನು ಕೆಳಹಂತದ ವರೆಗೆ ತಲುಪಿಸುವ ಕಾರ್ಯವನ್ನು ಅದು ಮಾಡುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಜಿ.ಕೆ.ವಿ.ಕೆ. ನಿವೃತ್ತ ಪ್ರಾಧ್ಯಾಪಕ ಡಾ.ಶ್ರೀಕಂಠಮೂರ್ತಿ, ವೆಂಕಟ್ ರೆಡ್ಡಿ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಮತ್ತು ಗುರುಲಿಂಗ ಗೌಡರ, ರೈತ ಮೋರ್ಚಾ ಕಾರ್ಯದರ್ಶಿ ಡಾ ನವೀನ್ ಅವರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!