ಹೊಸದಿಗಂತ ಡಿಜಿಟಲ್‌ ಡೆಸ್ಕ್:
ದಿನಾಲೂ ಒಂದೇ ರೀತಿಯ ಇಡ್ಲಿ ತಿಂದು ತಿಂದು ಬೋರ್‌ ಹಾಗಿದ್ದೀರಾ? ಒಂಚೂರು ಡಿಫರೆಂಟ್‌ ಟೇಸ್ಟ್‌ ಇರಲಿ ಅಂತ ನಿಮಗನ್ನಿಸುತ್ತದಾ? ಹಾಗಿದ್ದರೇ ಮನೆಯಲ್ಲಿಯೇ ದಿಡೀರ್‌ ಆಗಿ ರವಾ ಇಡ್ಲಿ ಮಾಡೋದು ಹೇಗೆ ಅಂತ ನಾವು ಹೇಳಿಕೊಡ್ತೀವಿ ನೋಡಿ. ಕೇವಲ 30 ನಿಮಿಷದಲ್ಲಿ ಸಾಫ್ಟ್‌ ಸಾಫ್ಟ್‌ ರವಾ ಇಡ್ಲಿ ಮಾಡಿ ಸವಿಯಿರಿ. ಈ ರೆಸಪಿಯಲ್ಲಿ ಬಳಸುವ ಪದಾರ್ಥಗಳೆಲ್ಲವೂ ನಿಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗುವಂಥದ್ದು. ಈ ವಿಧಾನದಿಂದ ಯಾರು ಬೇಕಾದರೂ ರುಚಿಕರವಾದ ʼರವಾ ಇಡ್ಲಿʼ ಮಾಡಬಹುದು. ಅದರಲ್ಲೂ ನೀವೊಬ್ಬ ಬ್ಯಾಚುಲರ್‌ ಆಗಿದ್ದರೆ ಖಂಡಿತ ನೀವಿದನ್ನು ಟ್ರೈ ಮಾಡಬಹುದು. ರೆಸಿಪಿ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು:
ಇಡ್ಲಿರವೆ – ಒಂದು ಕಪ್‌
ಮೊಸರು – ಕಾಲುಕಪ್‌
ಫ್ರುಟ್‌ ಸಾಲ್ಟ್-‌ ಎರಡು ಚಿಟಿಕೆ (ಕಡ್ಡಾಯವೇನಲ್ಲ)
ಹಸಿಮೆಣಸು – ಎರಡು (ಚಿಕ್ಕದಾದಿ ಕತ್ತರಿಸಿರಬೇಕು
ಗೋಡಂಬಿ – ನಾಲ್ಕರಿದ ಐದು
ಒಗ್ಗರಣೆಗೆ – ಎಣ್ಣೆ, ತುಪ್ಪ, ಇಂಗು (ಚಿಟಿಕೆಯಷ್ಟು) ಒಂದು ಟೀ ಸ್ಪೂನ್‌ ಉದ್ದು, ಅರ್ಧಚಮಚ ಸಾಸಿವೆ, ಅರ್ಧಚಮಚ ಜೀರಿಗೆ, ನಾಲ್ಕೈದು ಕರಿಬೇವಿನ ಎಲೆಗಳು.

ಮಾಡುವ ವಿಧಾನ:‌ 
1. ಮೊದಲು ಒಂದು ಪಾತ್ರೆಯಲ್ಲಿ ಇಡ್ಲಿರವೆ ಹಾಗೂ ಮೊಸರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಗಂಟುಗಳು ಬರದಂತೆ ಚೆನ್ನಾಗಿ ಕಲಸಿ ಪಕ್ಕಕ್ಕಿಡಿ.

2. ಗ್ಯಾಸಿನ ಮೇಲೆ ಬಾಣಲೆಯಿಟ್ಟು ಅದಕ್ಕೆ ಮೊದಲು ಒಂದು ಚಮಚ ತುಪ್ಪ ಹಾಗೇ ಅರ್ಧಚಮಚ ತುಪ್ಪ ಹಾಕಿ ಅದು ಸರಿಯಾಗಿ ಬಿಸಿಯಾದ ಮೇಲೆ ಹಸಿಮೆಣಸು, ಇಂಗು, ಉದ್ದಿನ ಬೇಳೆ, ಕರಿಬೇವು, ಗೋಡಂಬಿ ಹಾಕಿ ಚೆನ್ನಾಗಿ ಬಾಡಿಸಿ ಒಗ್ಗರಣೆ ಪೂರ್ತಿಯಾದ ಮೇಲೆ ಅದನ್ನು ಕಲಸಿಟ್ಟ ಮಿಶ್ರಣಕ್ಕೆ ಹಾಕಿ.

3. ಈಗ ಒಂದು ಚಿಟಿಕೆ ಫ್ರುಟ್‌ ಸಾಲ್ಟ್‌ (ಇಲ್ಲದಿದ್ದರೂ ಪರವಾಗಿಲ್ಲ) ಹಾಕಿ ಈ ಮಿಶ್ರಣವನ್ನು ತಿರುಗಿಸುತ್ತಾ ಅಗತ್ಯವಿರುವಷ್ಟು ನೀರು ಹಾಕಿ ಇಡ್ಲಿ ಹಿಟ್ಟಿನ ಹದ ಬರುವಂತೆ ಕಲಸಿ. ಹಿಟ್ಟು ಕೊಂಚ ಉಬ್ಬ ತೊಡಗುತ್ತದೆ. ಈ ಉಬ್ಬುವುದು ನಿಲ್ಲುವವರೆಗೂ ಮಿಶ್ರಣ ಮಾಡುತ್ತಲೇ ಇರಬೇಕು. ಈಗ ಇಡ್ಲಿ ಹಿಟ್ಟು ರೆಡಿ ಆಯ್ತು.

4. ಇಡ್ಲಿ ಪಾತ್ರದಲ್ಲಿ ನೀರು ಕಾಯಿಸಿಕೊಳ್ಳಿ, ಇಡ್ಲಿ ಪ್ಲೇಟಿಗೆ ಒಂದೆರಡು ಹನಿ ಎಣ್ಣೆ ಸವರಿಕೊಳ್ಳಿ, ಮನೆಯಲ್ಲಿ ಟೊಮೆಟೋ ಇದ್ದರೆ ರೌಂಡ್‌ ಆಗಿ ಹೆಚ್ಚಿರುವ ಟೋಮೆಟೋ ಸ್ಲೈಸನ್ನು ಅಡಿಯಲ್ಲಿ ಅಥವಾ ಹಿಟ್ಟಿನ ಮೇಲಿಂದ ಇಡಬಹುದು. ಎಲ್ಲಾ ಇಡ್ಲಿ ಪ್ಲೇಟಿಗೆ ಹಿಟ್ಟು ಹಾಕಿದಮೇಲೆ ಮೇಲಿಂದ ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ ಪಾತ್ರೆಯಲ್ಲಿ 10 ರಿಂದ 15 ನಿಮಿಷ ಬೇಯಿಸಿ.

ಈಗ ನಿಮ್ಮ ದಿಢೀರ್‌ ʼರವಾ ಇಡ್ಲಿʼ ರೆಡಿ. ಬಿಸಿಬಿಸಿಯಾದ ರವೆ ಇಡ್ಲಿಯ ಮೇಲೆ ಒಂಚೂರು ತುಪ್ಪ ಸವರಿ ಚಟ್ನಿ ಅಥವಾ ಸಾಂಬಾರಿನೊಂದಿಗೆ ಆಸ್ವಾದಿಸಿ.

LEAVE A REPLY

Please enter your comment!
Please enter your name here