ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೆನಾಡಿನ ತಂಬುಳಿಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು ಕಾಲಕಾಲಕ್ಕೆ ಸಿಗುವ ತರಹೇವಾರಿ ತರಕಾರಿ, ಸೊಪ್ಪುಗಳಿಂದ ವಿಧವಿಧವಾದ ತಂಬುಳಿಗಳನ್ನು ಮಾಡಲಾಗುತ್ತದೆ. ದೇಹಕ್ಕೆ ತಂಪು, ಆರೋಗ್ಯಕ್ಕೂ ಹಿತ, ತಿನ್ನಲೂ ರುಚಿಯಾಗಿರುವ ಈ ತಂಬುಳಿಗಳು ನಿಮ್ಮ ಊಟದ ರುಚಿ ಹೆಚ್ಚಿಸುತ್ತವೆ. ಕೆಲ ರೋಗಗಳನ್ನು ದೂರ ಮಾಡುವ ಇವು ನಿಮ್ಮ ಇಮ್ಯುನಿಟಿಯನ್ನು ಬೂಸ್ಟ್ ಮಾಡುತ್ತವೆ. ಅಂಥಹುದೇ ಒಂದು ತಂಬುಳಿಯ ರೆಸಿಪಿ ಇಲ್ಲಿದೆ. ಇದಕ್ಕೆ ಹೆಚ್ಚಿನ ಸಾಮಗ್ರಿಗಳೇನೂ ಬೇಕಿಲ್ಲ, ಯಾವುದೇ ಕಾಲದಲ್ಲಾದರೂ ಯಾವುದೇ ಸಮಯದಲ್ಲಾದರೂ ಎರಡೇ ನಿಮಿಶದಲ್ಲಿ ಮಾಡಬಹುದು. ಹೇಗೆ ಅಂತೀರಾ? ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ತೆಂಗಿನ ತುರಿ – ಒಂದು ಕಪ್
ಹುಣಸೇ ಹಣ್ಣು – ಒಂದರಿಂದ ಒಂದೂವರೆ ಚಮಚ
ಒಗ್ಗರಣೆ ಸಾಮಗ್ರಿ – ಒಂದು ಚಮಚ ಉದ್ದಿನ ಬೇಳೆ, ಒಂದು ಚಮಚ ಎಳ್ಳು, ಅರ್ಧಚಮಚ ಸಾಸಿವೆ, ಕೆಂಪುಮೆಣಸು ಒಂದು ಅಥವಾ ಎರಡು, ಒಂದು ಚಮಚ ಅಡುಗೆ ಎಣ್ಣೆ,
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಮೊದಲು ಒಗ್ಗರಣೆ ರೆಡಿ ಮಾಡಬೇಕು. ನೆನಪಿರಲಿ ನಿಮ್ಮ ತಂಬುಳಿಯ ಟೇಸ್ಟ್ ಈ ಒಗ್ಗರಣೆಯ ಆಧಾರದಲ್ಲಿರುತ್ತದೆ. ಹಾಗಾಗಿ ಹೆಚ್ಚೂ ಅಲ್ಲದ ಕಡಿಮೆಯೂ ಅಲ್ಲದ ಹದವಾದ ಒಗ್ಗರಣೆ ಹಾಕಬೇಕು.
1. ತೆಂಗಿನ ತುರಿಯನ್ನು ಒಂದು ಸಣ್ಣ ಜಾರ್ ನೊಳಗೆ ಹಾಕಿ ಪಕ್ಕಕ್ಕಿಡಿ.
2. ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ, ಎಣ್ಣೆ ಸರಿಯಾಗಿ ಬಿಸಿಯಾದ ಬಳಿಕ ಅದಕ್ಕೆ ಕೆಂಪು ಮೆಣಸು ಹಾಕಿ ಗರಿಗರಿಯಾಗಿ ಹುರಿಯಿರಿ. ನಂತರ ಅದಕ್ಕೆ ಒಂದು ಚಮಚ ಉದ್ದುನ ಬೇಳೆ, ಒಂದು ಚಮಚ ಎಳ್ಳು, ಕೊನೆಯಲ್ಲಿ ಸಾಸಿವೆ ಹಾಕಿ. ಸಾಸಿವೆ ಮತ್ತು ಎಳ್ಳು ಚಿಟಿಚಿಟಿ ಎಂದು ಘಮಿಸತೊಡಗುತ್ತದೆ. ಆಗ ಆ ಒಗ್ಗರಣೆಯನ್ನು ತೆಂಗಿನ ತುರಿಯ ಮೇಲೆ ಹಾಕಿ.
3. ಒಂದು ಚಮಚದಷ್ಟು ಹುಣಸೇ ಹಣ್ಣು (ರುಚಿಯ ಆಧಾರದ ಮೇಲೆ, ಹೆಚ್ಚು ಹುಳಿಯಾಗದಂತೆ) ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಮೊದಲು ಅರ್ಧಕಪ್ ನೀರು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ನಂತರ ಮತ್ತೊಂದು ಕಪ್ ನೀರು ಹಾಕಿ ತೆಳುವಾಗಿಸಿ ನುಣುಪಾಗುವವರೆಗೂ ರುಬ್ಬಿ.
ಕಾಯಿ ತಂಬುಳಿ ಈಗ ರೆಡಿ. ಬೇಕೆಂದರೆ ಕರಿಬೇವು ಸಾಸಿವೆ ಒಗ್ಗರಣೆ ಕೊಡಬಹುದು. ಅನ್ನದೊಂದಿಗೆ ಮಿಕ್ಸ್ ಮಾಡಿ ಸವಿಯಿರಿ.