ಹೊಸದಿಗಂತ ವರದಿ ಬೀದರ್:
ದ್ವಿಚಕ್ರ ವಾಹನ ಹಾಗೂ ಕೆಕೆಆರ್‌ಟಿಸಿ ಬಸ್ಸಿನ ನಡುವೆ ಢಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಹುಮನಾಬಾದ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-50ಯ ಕಬಿರಾಬಾದ್ ವಾಡಿ ಕ್ರಾಸ್ ಬಳಿ ಇಂದು ಬೆಳಿಗ್ಗೆ ನಡೆದಿದೆ.
ದುಬಲಗುಂಡಿ ಗ್ರಾಮದ ನಿವಾಸಿಗಳಾದ ಬೈಕ್ ಸವಾರ ಪವನ್ (22) ಹಾಗೂ ಬೈಕ್ ಹಿಂಬದಿ ಕುಳಿತ ಆತನ ಚಿಕ್ಕಮ್ಮ ನರಸಮ್ಮ (24) ಮೃತಪಟ್ಟವರು.
ಪವನ್ ಹಾಗೂ ನರಸಮ್ಮ ಅವರು ಕಾಮಾಲೆ ರೋಗಕ್ಕೆ ಮನ್ನಾಎಖ್ಖೇಳಿ ಗ್ರಾಮದಲ್ಲಿ ನಾಟಿಮದ್ದು ಹಾಕಿಸಿಕೊಂಡು, ತಮ್ಮ ಸ್ವಗ್ರಾಮವಾದ ದುಬಲಗುಂಡಿಗೆ ಬೈಕ್ ನಲ್ಲಿ ಹಿಂತಿರುಗುತ್ತಿದ್ದರು. ಬೆಳಿಗ್ಗೆ ಸುಮಾರು 7:30 ಗಂಟೆಗೆ ಕಬಿರಾಬಾದ್ ವಾಡಿ ಕ್ರಾಸ್ ಬಳಿ ಬರುತ್ತಿದ್ದಂತೆ, ವೇಗವಾಗಿ ಬಂದ ಬೀದರ್-ಕಲಬುರ್ಗಿ ಮಾರ್ಗದ ತಡೆರಹಿತ ಸಾರಿಗೆ ಬಸ್ಸು ಇವರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ.
ಮೃತದೇಹಗಳನ್ನು ಮರಣೋತ್ತರ ನಂತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಹಳ್ಳಿಖೇಡ್(B) ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.



