Friday, June 2, 2023

Latest Posts

ನದಿಯಲ್ಲಿ ಬಿದ್ದ ಮಗನನ್ನು ಕಾಪಾಡಲು ನೀರಿಗೆ ಹಾರಿದ ತಂದೆ, ಇಬ್ಬರೂ ನೀರುಪಾಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಚಿಕ್ಕಮಗಳೂರು ಜಿಲ್ಲೆ ಮಾಗುಂಡಿ ಸಮೀಪ ಭದ್ರಾ ನದಿಯಲ್ಲಿ ಮುಳುಗಿ ತಂದೆ ಮಗ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಮೃತರನ್ನು ಮೂಡಿಗೆರೆ ಸಮೀಪದ ಹಂಡುಗುಳಿ ಗ್ರಾಮದ ಲೋಕೇಶ್(40 ವರ್ಷ) ಮತ್ತು ಅವರ ಮಗ ಸಾತ್ವಿಕ್(13 ವರ್ಷ) ಎಂದು ಗುರುತಿಸಲಾಗಿದೆ.

ಮಾಗುಂಡಿ ಸಮೀಪದ ಹುಯ್ಗೆರೆ ಗ್ರಾಮದಲ್ಲಿ ತಮ್ಮ ಸಂಬಂಧಿಕರ ಮನೆಗೆ ಸುಗ್ಗಿ ಹಬ್ಬಕ್ಕೆಂದು ಲೋಕೇಶ್ ತನ್ನ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ತೆರಳಿದ್ದರು.

ಶನಿವಾರ ಸಂಜೆ ಮನೆಯ ಸಮೀಪದಲ್ಲೇ ಹರಿಯುತ್ತಿರುವ ಭದ್ರ ನದಿಯ ಬಳಿಗೆ ನಿನ್ನೆ ಸಂಜೆ ಸಂಬಂಧಿಕರೊಂದಿಗೆ ತೆರಳಿದ್ದಾರೆ. ಸಂಜೆ ಸುಮಾರು 4ರ ಸಮಯದಲ್ಲಿ ಹೊಳೆಯಲ್ಲಿ ಬಂಡೆಯೊಂದರ ಮೇಲೆ ನಿಂತಿದ್ದ ಸಾತ್ವಿಕ್ ಕಾಲು ಜಾರಿ ನೀರಿಗೆ ಬಿದ್ದಿದ್ದು, ಈ ಸಂದರ್ಭದಲ್ಲಿ ಮಗನನ್ನು ರಕ್ಷಿಸಲು ತಂದೆ ಲೋಕೇಶ್ ಸಹ ನದಿಗೆ ಹಾರಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರಿಗೂ ಈಜು ಬರುತ್ತಿರಲಿಲ್ಲ ಎಂದು ತಿಳಿದುಬಂದಿದೆ.

ಕುಟುಂಬದವರ ಕಣ್ಣೆದುರೆ ಇಬ್ಬರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಅವರನ್ನು ರಕ್ಷಿಸಲು ಸಂಬಂಧಿಕರು ಮುಂದಾಗಿದ್ದು, ಪ್ರಯತ್ನ ವಿಫಲವಾಗಿದೆ.

ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಿ ರಾತ್ರಿ ಹಂಡುಗುಳಿ ಗ್ರಾಮಕ್ಕೆ ತರಲಾಗಿದೆ.

ಮೃತರ ಕುಟುಂಬ, ಸಂಬಂಧಿಕರು ಮತ್ತು ಗ್ರಾಮಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!