ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬಂಡೀಪುರ ಸಫಾರಿಗೆ ಪ್ರಧಾನಿ ಮೋದಿ ಭೇಟಿ ನೀಡಿರುವುದು ಕೆಲ ನಾಯಕರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಟೀಕಿಸಿದರು. ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ..ಹುಲಿ ರಕ್ಷಣೆ, ಪೋಷಣೆ, ಗಣಕೀಕರಣಕ್ಕೆ ಸಂಬಂಧಿಸಿ ನಮ್ಮ ರಾಜ್ಯದ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿಜಿಯವರ ಭೇಟಿ ಸಂತೋಷಕರ. 1970-75ರ ದಶಕದಲ್ಲಿ ಹುಲಿಗಳ ಸಂಖ್ಯೆ ಕಡಿಮೆ ಆಗುತ್ತಿತ್ತು. ಹುಲಿ ರಕ್ಷಣೆ, ಪೋಷಣೆಗಾಗಿ ಬಂಡೀಪುರ, ಮಧ್ಯಪ್ರದೇಶದಲ್ಲಿ ಒಂದು ಯೋಜನೆ ಜಾರಿ ಮಾಡಲಾಗಿತ್ತು. ಹುಲಿ ರಕ್ಷಣೆ, ಸಂಖ್ಯೆ ವೃದ್ಧಿಯಲ್ಲಿ ಕರ್ನಾಟಕ ಈಗ ನಂಬರ್ 2ನೇ ಸ್ಥಾನದಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇವತ್ತು 2 ಗಂಟೆ ಸಫಾರಿ, ಹುಲಿ, ಆನೆಗಳ ರಕ್ಷಣೆಗೆ ಮೆಚ್ಚುಗೆ, ಆನೆ ರಕ್ಷಣೆ ಮಾಡುವ ಕುಟುಂಬದ ಜೊತೆ ಮಾತುಕತೆ ಮಾಡಿದ ಪ್ರಧಾನಿಯವರು ಅಭಿನಂದನಾರ್ಹರು. ಆದರೆ, ಪ್ರಧಾನಿಯವರ ಭೇಟಿ ಕೆಲವೇ ಕೆಲವು ನಾಯಕರಿಗೆ ದುಃಖ ತಂದಿದೆ. ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಅವರು ಪ್ರಧಾನಿ ಭೇಟಿಯನ್ನು ಖಂಡಿಸಿದ್ದಾರೆ. ಇವರು ಸಣ್ಣ ಮನಸ್ಸು ಹೊಂದಿದ್ದಾರೆ. ಪ್ರವಾಹ, ಕೋವಿಡ್ ವೇಳೆ ಭೇಟಿ ಕೊಟ್ಟಿಲ್ಲ ಎಂಬ ಇಲ್ಲಸಲ್ಲಸ ಪ್ರಶ್ನೆಗಳನ್ನೆತ್ತಿದ್ದಾರೆ. ಇಂತಹ ಸಣ್ಣ ಮನಸ್ಸಿನ ವ್ಯಕ್ತಿಗಳು ಎಂದಿಗೂ ದೊಡ್ಡ ನಾಯಕರು ಆಗಲು ಅಸಾಧ್ಯ ಎಂದು ಟೀಕಿಸಿದರು.
ಕೊರೊನಾ ಲಸಿಕೆಯಲ್ಲೂ ರಾಜಕೀಯ ಮಾಡಿದ್ರು
ರಾಜ್ಯದಲ್ಲಿ ಕನಿಷ್ಠ ವೈದ್ಯರಿದ್ದರೂ ಕೋವಿಡ್ ಸಾಂಕ್ರಾಮಿಕವನ್ನು ಅಚ್ಚುಕಟ್ಟಾಗಿ ನಿಯಂತ್ರಿಸಿದ್ದೇವೆ. ಆಗ ಲಸಿಕೆ ನೀಡಿ ಮನುಷ್ಯರನ್ನು ರಕ್ಷಿಸಿದವರು ಯಾರು ಎಂದು ಡಿ.ಕೆ.ಶಿ, ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು. ಲಸಿಕೆ ವಿಚಾರದಲ್ಲಿ ಮೊದಲು ರಾಜಕೀಯ ಮಾಡಿ, ಆಮೇಲೆ ಲಸಿಕೆ ಪಡೆದಿಲ್ಲವೇ ಎಂದು ಪ್ರಶ್ನಿಸಿದರು.
ಪ್ರಪಂಚದ ವಿವಿಧ ದೇಶಗಳಿಗೆ ಕೋವಿಡ್ ಲಸಿಕೆ ಕಳುಹಿಸಿದ್ದೇವೆ. ಇದನ್ನು ನೀವು ಅರ್ಥ ಮಾಡಿಕೊಳ್ಳಿ. ಪ್ರಧಾನಿಯವರು ಮನುಷ್ಯರ ರಕ್ಷಣೆ ಮಾಡಿದ್ದನ್ನು ಮತ್ತು ಆರ್ಥಿಕ ರಂಗ ಕುಸಿಯದಂತೆ ತಡೆದು ಆರ್ಥಿಕ ಚೇತರಿಕೆ ಕಂಡುಕೊಂಡಿದ್ದನ್ನು ಗಮನದಲ್ಲಿ ಇಡಿ ಎಂದರು.