October 5, 2026
Monday, October 5, 2026
spot_img

8 ವರ್ಷದ ವಿಶೇಷಚೇತನ ಮಗಳ ಮೇಲೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯ: ಆರೋಪಿ ಅರೆಸ್ಟ್

ಹೊಸದಿಗಂತ ವರದಿ ರಾಮನಗರ:

ಬಿಹಾರ ಮೂಲದ ವ್ಯಕ್ತಿಯೊಬ್ಬ ಮಾತು ಬಾರದ ಮತ್ತು ಕಿವಿ ಕೇಳದ ತನ್ನ 8 ವರ್ಷದ ಪುತ್ರಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಹಾರೋಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸ್ವಂತ ತಂದೆಯ ಹೀನಕೃತ್ಯದಿಂದಾಗಿ ಆಘಾತಕ್ಕೊಳಗಾಗಿರುವ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀನಕೃತ್ಯ ಬೆಳಕಿಗೆ ಬರುತ್ತಿದ್ದಂತೆ, ಪೊಲೀಸರು ಪೋಕ್ಸೊ ಕಾಯ್ದೆಯಡಿ ತಂದೆಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

30 ವರ್ಷದ ಆತ ಬಿಹಾರದವನಾಗಿದ್ದು, ಎರಡು ತಿಂಗಳ ಹಿಂದೆಯಷ್ಟೇ ಉದ್ಯೋಗ ಅರಸಿ ಪತ್ನಿ ಮತ್ತು ಮಕ್ಕಳೊಂದಿಗೆ ಹಾರೋಹಳ್ಳಿಗೆ ಬಂದಿದ್ದ. ಅತ್ಯಾಚಾರಕ್ಕೊಳಗಾಗಿರುವ ಬಾಲಕಿ ಆರೋಪಿಯ ಮೊದಲ ಪತ್ನಿಗೆ ಜನಿಸಿದ್ದು, ಅನಾರೋಗ್ಯದಿಂದಾಗಿ ಅವರು ತೀರಿಕೊಂಡಿದ್ದರು. ಮಾತು ಬಾರದ ಮತ್ತು ಕಿವಿ ಕೇಳದ ಮಗುವಿನ ಆರೈಕೆಗಾಗಿ ಆತ ಮತ್ತೆ ಮದುವೆಯಾಗಿದ್ದು, ಎರಡನೇ ಪತ್ನಿಗೆ ಮೂವರು ಮಕ್ಕಳಿದ್ದಾರೆ. ನಾಲ್ವರೂ ಮಕ್ಕಳು ದಂಪತಿ ಜೊತೆಗಿದ್ದರು.

ಕಾರ್ಖಾನೆಯೊಂದಕ್ಕೆ ದಂಪತಿ ಕೆಲಸಕ್ಕೆ ಹೋಗುತ್ತಿದ್ದರು. ವಾರದ ಹಿಂದೆ ಮೊದಲ ಪುತ್ರಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತು. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಪತ್ನಿ ಕರೆದೊಯ್ದಿದ್ದರು ಎಂದು ಪೊಲೀಸರು ತಿಳಿಸಿದರು.

ಇದನ್ನೂ ಓದಿ:

ಮಗುವಿನ ಸ್ಥಿತಿ ಗಮನಿಸಿದ ವೈದ್ಯರು, ಲೈಂಗಿಕ ದೌರ್ಜನ್ಯ ನಡೆದಿರುವ ಶಂಕೆ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿದ ಘಟಕದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವು ಖಚಿತವಾಯಿತು‌ ಎಂದು ಪೊಲೀಸರು ತಿಳಿಸಿದರು.

ಆದರೆ, ಮಾತು ಬಾರದ ಮತ್ತು ಕಿವಿ ಕೇಳದ ಬಾಲಕಿ ಏನನ್ನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಕಡೆಗೆ ಸಂಜ್ಞೆ ಭಾಷೆ ಬಲ್ಲವರನ್ನು ಕರೆಯಿಸಿ ಮಗುವಿನಿಂದ ಕೆಲ ಮಾಹಿತಿ ಪಡೆಯಲಾಯಿತು. ಆದರೆ, ಕೃತ್ಯ ಎಸಗಿರುವವರ ಬಗ್ಗೆ ಮಾಹಿತಿ ಸಿಗಲಿಲ್ಲ. ಪೋಕ್ಸೊ ಕಾಯ್ದೆಯಡಿ ಅಪರಿಚಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಲಾಯಿತು ಎಂದು ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ತಂದೆಯನ್ನು ವಿಚಾರಣೆ ನಡೆಸಿದಾಗ ತನಗೇನು ಗೊತ್ತಿಲ್ಲ ಎಂದು ಅಮಾಯಕನಂತೆ ವರ್ತಿಸಿದ. ಕಡೆಗೆ, ಅವರು ವಾಸವಿದ್ದ ಬಾಡಿಗೆ ಮನೆಯ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಗಳಿಗಳನ್ನು ಪರಿಶೀಲಿಸಲಾಯಿತು. ಆಗ ಮನೆಯಲಿದ್ದಾಗ ತಂದೆಯ ಚಲನವಲನವು ಅನುಮಾನ ಹುಟ್ಟಿಸಿತು. ಆತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ತಾನೇ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡ. ಬಳಿಕ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಸದ್ಯ ಬಾಲಕಿ ಸುಧಾರಿಸಿಕೊಳ್ಳುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Must Read