September 16, 2026
Wednesday, September 16, 2026
spot_img

ಇದೇ ಮೊದಲ ಬಾರಿಗೆ ಮೆಕ್ಕಾದಲ್ಲಿ ವೈಮಾನಿಕ ದಾಳಿ ಭೀತಿ: ಹೌತಿ ಡ್ರೋನ್‌ ಹೊಡೆದು ಉರುಳಿಸಿದ ಸೌದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಸ್ಲಾಂ ಧರ್ಮದ ಪವಿತ್ರ ನಗರ ಮೆಕ್ಕಾಗೆ ವೈಮಾನಿಕ ದಾಳಿ ಭೀತಿ ಎದುರಾಗಿದೆ.ಇದೀಗ ಬಂದ ಮಾಹಿತಿ ಅನ್ವಯ ಹೌತಿ ಡ್ರೋನ್‌ ಒಂದನ್ನು ಸೌದಿ ಹೊಡೆದು ಉರುಳಿಸಿದೆ.

ಹೌದು, ಮೆಕ್ಕಾ ಸೇರಿದಂತೆ ಜೆಡ್ಡಾ ಹಾಗೂ ತೈಫ್‌ ಗವರ್ನರೇಟ್‌ಗಳಲ್ಲಿ ಮಂಗಳವಾರ ಸೌದಿ ಅರೇಬಿಯಾ ನಾಗರಿಕ ರಕ್ಷಣಾ ಇಲಾಖೆ ವೈಮಾನಿಕ ದಾಳಿಯ ಭೀತಿಯಿಂದ ತುರ್ತು ಎಚ್ಚರಿಕೆ ಘೋಷಿಸಿದ ಘಟನೆ ನಡೆದಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕಾ ನಗರದಲ್ಲಿ ಇಂತಹ ವೈಮಾನಿಕ ಎಚ್ಚರಿಕೆಯನ್ನು ಸೈರನ್ ಮೂಲಕ ಮೊಳಗಿಸಲಾಗಿದ್ದು, ಕೆಲವೇ ಹೊತ್ತಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಎಚ್ಚರಿಕೆಯನ್ನು ಹಿಂಪಡೆಯಲಾಯಿತು.

ಸ್ಥಳೀಯ ಕಾಲಮಾನ ಸಂಜೆ ಸುಮಾರು 6:50ಕ್ಕೆ ಮೆಕ್ಕಾದ ನಿರ್ಬಂಧಿತ ವಾಯುಪ್ರದೇಶವನ್ನು ಪ್ರವೇಶಿಸಲು ಯತ್ನಿಸುತ್ತಿದ್ದ ಹೌತಿಗಳ ಡ್ರೋನ್‌ ಒಂದನ್ನು ಮೆಕ್ಕಾದ ದಕ್ಷಿಣ ಭಾಗದಲ್ಲೇ ಸೌದಿ ವಾಯು ರಕ್ಷಣಾ ಪಡೆ ಹೊಡೆದುರುಳಿಸಿದೆ ಎಂದು ಸೌದಿ ನೇತೃತ್ವದ ಒಕ್ಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಾಲಿಕಿ ತಿಳಿಸಿದ್ದಾರೆ. 2017ರ ಕ್ಷಿಪಣಿ ದಾಳಿಯ ಯತ್ನದ ಬಳಿಕ, ಪವಿತ್ರ ನಗರವನ್ನು ಗುರಿಯಾಗಿಸಲು ಹೌತಿಗಳು ನಡೆಸಿದ ಎರಡನೇ ಪ್ರಯತ್ನ ಇದಾಗಿದೆ ಎಂದು ಅವರು ಹೇಳಿದ್ದಾರೆ.

ಇನ್ನು ಮುನ್ನೆಚ್ಚರಿಕೆ ಭಾಗವಾಗಿ ಮದೀನಾದ ಪ್ರಿನ್ಸ್‌ ಮೊಹಮ್ಮದ್ ಬಿನ್ ಅಬ್ದುಲ್ ಅಜೀಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !