May 31, 2026
Sunday, May 31, 2026
spot_img

ಗಲ್ಫ್‌ನಲ್ಲಿ ಮತ್ತೆ ಯುದ್ಧದ ಭೀತಿ? ಶ್ವೇತಭವನದ ಸಭೆ ಅರ್ಧಕ್ಕೇ ನಿಲ್ಲಿಸಿದ ಡೊನಾಲ್ಡ್ ಟ್ರಂಪ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದವು ಈಗ ಸಂಪೂರ್ಣವಾಗಿ ಅತಂತ್ರ ಸ್ಥಿತಿಗೆ ತಲುಪಿದೆ. ಶ್ವೇತಭವನದ ‘ಸಿಚುಯೇಷನ್ ರೂಮ್‌’ನಲ್ಲಿ ನಡೆದ ಉನ್ನತ ಮಟ್ಟದ ಭದ್ರತಾ ಸಭೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯಾವುದೇ ಅಂತಿಮ ತೀರ್ಮಾನ ತೆಗೆದುಕೊಳ್ಳದೆ ಅರ್ಧಕ್ಕೇ ಹೊರನಡೆದಿದ್ದಾರೆ. ಟ್ರಂಪ್ ಅವರ ಈ ದಿಢೀರ್ ನಿರ್ಧಾರದಿಂದಾಗಿ ಗಲ್ಫ್ ರಾಷ್ಟ್ರಗಳ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿದ್ದ ಬಹುನಿರೀಕ್ಷಿತ ಯುದ್ಧ ವಿರಾಮ ಮಾತುಕತೆಗೆ ಭಾರಿ ಹಿನ್ನಡೆಯಾಗಿದೆ.

ಸಭೆಯಿಂದ ಹೊರನಡೆದ ಡೊನಾಲ್ಡ್ ಟ್ರಂಪ್

ಇರಾನ್ ಜೊತೆಗಿನ ದೀರ್ಘಕಾಲದ ಸಂಘರ್ಷಕ್ಕೆ ಮುಕ್ತಾಯ ಹಾಡಲು ಹಿರಿಯ ರಾಜತಾಂತ್ರಿಕರು ಮತ್ತು ರಕ್ಷಣಾ ಅಧಿಕಾರಿಗಳೊಂದಿಗೆ ಟ್ರಂಪ್ ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿದರು. ಆದರೆ, ಸಿದ್ಧಪಡಿಸಲಾಗಿದ್ದ ಒಪ್ಪಂದದ ಕರಡು ಪ್ರತಿಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಟ್ರಂಪ್, ಯಾವುದೇ ಅಂತಿಮ ನಿರ್ಣಯ ಪ್ರಕಟಿಸದೆ ಸಭೆಯನ್ನು ರದ್ದುಗೊಳಿಸಿ ಹೊರನಡೆದರು.

ಇರಾನ್‌ಗೆ ಅಮೆರಿಕ ವಿಧಿಸಿರುವ 3 ಕಠಿಣ ಷರತ್ತುಗಳು

ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಧಕ್ಕೆಯಾಗುವ ಯಾವುದೇ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಟ್ರಂಪ್, ಇರಾನ್ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ:

ಪರಮಾಣು ಕಾರ್ಯಕ್ರಮಕ್ಕೆ ಬ್ರೇಕ್: ಇರಾನ್ ತನ್ನ ಪರಮಾಣು ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಮತ್ತು ಪರಮಾಣು ಬಾಂಬ್ ಹೊಂದುವಂತಿಲ್ಲ.
ಹಾರ್ಮುಜ್ ಜಲಸಂಧಿ ಮುಕ್ತ: ಅಂತರರಾಷ್ಟ್ರೀಯ ಹಡಗುಗಳ ಸಂಚಾರಕ್ಕೆ ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಮುಕ್ತಗೊಳಿಸಬೇಕು ಹಾಗೂ ಅಲ್ಲಿರುವ ಎಲ್ಲಾ ನೌಕಾ ಮೈನ್‌ಗಳನ್ನು ತೆರವುಗೊಳಿಸಬೇಕು.
ಆರ್ಥಿಕ ನಿರ್ಬಂಧಗಳ ಮುಂದುವರಿಕೆ: ಒಪ್ಪಂದದ ನಿಯಮಗಳಿಗೆ ಸಂಪೂರ್ಣವಾಗಿ ಒಪ್ಪುವವರೆಗೆ ಇರಾನ್‌ನ ಯಾವುದೇ ಆಸ್ತಿ ಅಥವಾ ಹಣಕಾಸಿನ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಅಮೆರಿಕ ಹಿಂಪಡೆಯುವುದಿಲ್ಲ.

ಇರಾನ್ ತೀವ್ರ ಆಕ್ಷೇಪ

ಟ್ರಂಪ್ ಅವರ ಈ ಕಠಿಣ ನಿಲುವುಗಳಿಗೆ ಇರಾನ್ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಟ್ರಂಪ್ ಹೇಳಿಕೆಗಳು “ಸತ್ಯ ಮತ್ತು ಸುಳ್ಳುಗಳ ಮಿಶ್ರಣ” ಎಂದು ಇರಾನ್‌ನ ಅಧಿಕೃತ ಮಾಧ್ಯಮಗಳು ಟೀಕಿಸಿವೆ. ಸದ್ಯಕ್ಕೆ ಕೇವಲ ಯುದ್ಧ ನಿಲ್ಲಿಸುವುದಷ್ಟೇ ನಮ್ಮ ಮೊದಲ ಆದ್ಯತೆಯಾಗಿದ್ದು, ಪರಮಾಣು ವಿಷಯಗಳ ಬಗ್ಗೆ ಈಗಲೇ ಚರ್ಚಿಸುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಗಲ್ಫ್ ರಾಷ್ಟ್ರಗಳ ಸತತ ಪ್ರಯತ್ನದಿಂದ ನಡೆಯುತ್ತಿದ್ದ ಈ ಶಾಂತಿ ಮಾತುಕತೆಯು ಸದ್ಯಕ್ಕೆ ಮತ್ತೆ ನೆನೆಗುದಿಗೆ ಬಿದ್ದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !