ಫೀ.ಮಾ.ಕಾರ್ಯಪ್ಪ ನಾಮಫಲಕ ನಾಪತ್ತೆ: ಕ್ರಮಕ್ಕೆ ಒತ್ತಾಯ

ಹೊಸದಿಗಂತ ವರದಿ, ಕೊಡಗು:
ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಇತ್ತೀಚೆಗೆ ಅಳವಡಿಸಿದ್ದ ಫೀ.ಮಾ.ಕೆ.ಎಂ.ಕಾರ್ಯಪ್ಪ ಸರ್ಕಲ್ ಎಂಬ ಆಕರ್ಷಕ ನಾಮಫಲಕ ನಾಪತ್ತೆಯಾಗಿದ್ದು, ಮಡಿಕೇರಿ ನಗರಸಭೆ ಮತ್ತು ಪೊಲೀಸ್ ಇಲಾಖೆ ಇದರ ನಿಜಾಂಶವನ್ನು ಕಂಡು ಹಿಡಿದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ್ದ ಅವರು, ನಾಮಫಲಕ ನಾಪತ್ತೆಯಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.


ಕೆಲವು ದಿನಗಳ ಹಿಂದೆ ರೋಟರಿ ಇನ್ನರ್ ವೀಲ್ ಸಂಸ್ಥೆಯವರು ವೀರ ಸೇನಾನಿ ಫೀ.ಮಾ.ಕೆ.ಎಂ.ಕಾರ್ಯಪ್ಪ ಅವರ ಮೇಲಿನ ಅಭಿಮಾನದಿಂದ ಕಾರ್ಯಪ್ಪ ವೃತ್ತದಲ್ಲಿ ನಾಮಫಲಕ ಅಳವಡಿಸಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ನಾಮಫಲಕ ಇಲ್ಲದಾಗಿದ್ದು, ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ನಗರಸಭೆಯನ್ನು ವಿಚಾರಿಸಿದರೆ ಅಪಘಾತ ಸಂಭವಿಸಿರಬಹುದು ಎನ್ನುವ ಉತ್ತರ ಕೇಳಿ ಬಂದಿದೆ. ಒಂದು ವೇಳೆ ಅಪಘಾತ ನಡೆದಿದ್ದರೆ ಫಲಕ ಅಲ್ಲೇ ಇರಬೇಕಾಗಿತ್ತಲ್ಲ ಎಂದು ಪ್ರಶ್ನಿಸಿರುವ ಶಿವಕುಮಾರ್ ನಾಣಯ್ಯ, ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಸತ್ಯಾಂಶ ಬಹಿರಂಗ ಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಕಾರ್ಯಪ್ಪ ಅವರ ಪ್ರತಿಮೆಗೆ ಅವಮಾನ ಮಾಡಲಾಗಿತ್ತು, ಇದೀಗ ನಾಮಫಲಕ ನಾಪತ್ತೆಯಾಗಿದೆ. ಈ ಬಗ್ಗೆ ಕೂಲಂಕುಶ ತನಿಖೆಯಾಗಬೇಕು, ಉದ್ದೇಶಪೂರ್ವಕವಾಗಿ ತಪ್ಪು ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ವೀರ ಸೇನಾನಿಗಳ ಪ್ರತಿಮೆಗಳಿರುವ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಮತ್ತು ವಿದ್ಯುತ್ ದೀಪಗಳೊಂದಿಗೆ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!