July 23, 2026
Thursday, July 23, 2026
spot_img

FIFA 2026: ಎಂಬಾಪೆ ಮಾತ್ರವಲ್ಲ ಡೆಂಬೆಲೆ ಕೂಡ ಡೇಂಜರಸ್: ನಾಕೌಟ್‌ಗೆ ಲಗ್ಗೆ ಇಟ್ಟ ‘ಲೆ ಬ್ಲೂಸ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫಿಫಾ ವಿಶ್ವಕಪ್ 2026 ರಲ್ಲಿ ಫ್ರಾನ್ಸ್ ತಂಡದ ಪ್ರಭುತ್ವ ಮುಂದುವರಿದಿದೆ. ಮೊದಲ ಪಂದ್ಯದಲ್ಲಿ ಇರಾಕ್ ವಿರುದ್ಧ 3-0 ಹಾಗೂ ಸೆನೆಗಲ್ ವಿರುದ್ಧ 3-1 ರಿಂದ ಗೆದ್ದಿದ್ದ ಫ್ರಾನ್ಸ್, ಇದೀಗ ಬಲಿಷ್ಠ ನಾರ್ವೆಯನ್ನು 4-1 ಅಂತರದಿಂದ ಮಣಿಸಿ ಅಧಿಕೃತವಾಗಿ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ.

28 ವರ್ಷಗಳ ಹಳೇ ಇತಿಹಾಸ ಮರುಕಳಿಸಿದ ‘ಲೆ ಬ್ಲೂಸ್’

ಈ ಭರ್ಜರಿ ಗೆಲುವಿನೊಂದಿಗೆ ಫ್ರಾನ್ಸ್ ಬರೋಬ್ಬರಿ 28 ವರ್ಷಗಳ ಬಳಿಕ ಗ್ರೂಪ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಇದಕ್ಕೂ ಮುನ್ನ 1998 ರಲ್ಲಿ ಈ ಸಾಧನೆ ಮಾಡಿದ್ದ ಫ್ರಾನ್ಸ್ ಚಾಂಪಿಯನ್ ಆಗಿತ್ತು. ಪ್ರಸ್ತುತ ಟೂರ್ನಿಯ ಮೊದಲ 3 ಪಂದ್ಯಗಳಲ್ಲಿ ಫ್ರಾನ್ಸ್ ಬರೋಬ್ಬರಿ 10 ಗೋಲುಗಳನ್ನು ಬಾರಿಸಿದ್ದು, ಕೇವಲ 2 ಗೋಲುಗಳನ್ನು ಮಾತ್ರ ಬಿಟ್ಟುಕೊಟ್ಟಿದೆ. ಇದು ತಂಡದ ಬಲಿಷ್ಠ ಡಿಫೆನ್ಸ್ ಹಾಗೂ ಅಟ್ಯಾಕಿಂಗ್ ಆಟಕ್ಕೆ ಸಾಕ್ಷಿಯಾಗಿದೆ.

ಡೆಂಬೆಲೆ ಮಿಂಚಿನ ಹ್ಯಾಟ್ರಿಕ್; ಎಂಬಾಪೆ ಮಾಸ್ಟರ್ ಕ್ಲಾಸ್ ಅಸಿಸ್ಟ್

ನಾರ್ವೆ ವಿರುದ್ಧದ ಪಂದ್ಯದಲ್ಲಿ ರೈಟ್ ವಿಂಗರ್ ಉಸ್ಮಾನೆ ಡೆಂಬೆಲೆ ಪಂದ್ಯದ 7, 20 ಮತ್ತು 32ನೇ ನಿಮಿಷಗಳಲ್ಲಿ ಗೋಲು ಸಿಡಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಪಂದ್ಯದ ಕೊನೆಯಲ್ಲಿ (90+4′ ನಿಮಿಷ) ಡೆಸಿರೆ ಡೌ ಮತ್ತೊಂದು ಗೋಲು ಬಾರಿಸಿ ಜಯದ ಅಂತರ ಹೆಚ್ಚಿಸಿದರು.

ನಾರ್ವೆ ಡಿಫೆಂಡರ್‌ಗಳು ಸ್ಟಾರ್ ಆಟಗಾರ ಕಿಲಿಯನ್ ಎಂಬಾಪೆಯನ್ನು ಕಟ್ಟಿಹಾಕಲು ರಣತಂತ್ರ ರೂಪಿಸಿದ್ದರು. ಆದರೆ ಎಂಬಾಪೆ ತಾವೇ ಗೋಲು ಹೊಡೆಯುವ ಬದಲು, ಸಹ ಆಟಗಾರರಿಗೆ ಎರಡು ಅದ್ಭುತ ಅಸಿಸ್ಟ್ (ಗೋಲು ಹೊಡೆಯಲು ಪಾಸ್) ನೀಡುವ ಮೂಲಕ ನಾರ್ವೆ ತಂತ್ರವನ್ನು ಉಲ್ಟಾ ಮಾಡಿದರು. ಫ್ರಾನ್ಸ್ ಕೇವಲ ಒಬ್ಬೇ ಆಟಗಾರನ ಮೇಲೆ ಅವಲಂಬಿತವಾಗಿಲ್ಲ ಎಂಬುದನ್ನು ಈ ಪಂದ್ಯ ಸಾಬೀತುಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !