April 24, 2026
Friday, April 24, 2026
spot_img

14 ಎಸೆತಗಳಲ್ಲಿ ಫಿಫ್ಟಿ! ಡಿವೈ ಪಾಟೀಲ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಶತಕ ಬಾರಿಸಿ ಭಾರತಕ್ಕೆ ಕಿರೀಟ ತೊಡಿಸಿದ್ದ ಬಿಹಾರದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ, ಈಗ ದೇಶಿ ಟೂರ್ನಿಯಲ್ಲೂ ರನ್ ಮಳೆ ಹರಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ. ಕೇವಲ 14 ವರ್ಷದ ಈ ಬ್ಯಾಟಿಂಗ್ ವಿಸ್ಮಯ, ನಡೆಯುತ್ತಿರುವ ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಎದುರಾಳಿ ತಂಡವನ್ನು ಮಣ್ಣುಮುಕ್ಕಿಸಿದ್ದಾರೆ.

ಡಿವೈ ಪಾಟೀಲ್ ಬ್ಲೂ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ವೈಭವ್, ನೌಕಾಪಡೆಯ ಬೌಲರ್‌ಗಳ ವಿರುದ್ಧ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಅವರು ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಎಲ್ಲರನ್ನೂ ಬೆರಗುಗೊಳಿಸಿದರು. ಒಟ್ಟಾರೆ 19 ಎಸೆತಗಳನ್ನು ಎದುರಿಸಿದ ಅವರು 7 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 63 ರನ್ ಚಚ್ಚಿದರು. ಅವರ ಈ ಇನ್ನಿಂಗ್ಸ್‌ನ ಸ್ಟ್ರೈಕ್ ರೇಟ್ ಬರೋಬ್ಬರಿ 331.58 ಆಗಿತ್ತು!

ನೌಕಾಪಡೆ ನೀಡಿದ್ದ 220 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಡಿವೈ ಪಾಟೀಲ್ ಬ್ಲೂ ತಂಡಕ್ಕೆ ವೈಭವ್ ಭದ್ರ ಅಡಿಪಾಯ ಹಾಕಿಕೊಟ್ಟರು. ವೈಭವ್ ಔಟಾದ ನಂತರ ಜವಾಬ್ದಾರಿ ವಹಿಸಿಕೊಂಡ ಅರ್ಜುನ್ ತೆಂಡೂಲ್ಕರ್, ಅಜೇಯ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅರ್ಜುನ್ ಕೇವಲ 29 ಎಸೆತಗಳಲ್ಲಿ 55 ರನ್ (7 ಬೌಂಡರಿ, 2 ಸಿಕ್ಸರ್) ಬಾರಿಸಿ ತಂಡಕ್ಕೆ 19.1 ಓವರ್‌ಗಳಲ್ಲೇ ಭರ್ಜರಿ ಜಯ ತಂದುಕೊಟ್ಟರು.

ಅಂಡರ್-19 ವಿಶ್ವಕಪ್‌ನಲ್ಲಿ ಮಿಂಚಿದ್ದ ವೈಭವ್ ಸೂರ್ಯವಂಶಿ, ಇದೀಗ ಹಿರಿಯ ಆಟಗಾರರ ನಡುವೆಯೂ ಯಾವುದೇ ಭಯವಿಲ್ಲದೆ ಬ್ಯಾಟ್ ಬೀಸುತ್ತಿರುವುದು ಭಾರತೀಯ ಕ್ರಿಕೆಟ್‌ನ ಭವಿಷ್ಯದ ಭರವಸೆಯಾಗಿ ಕಾಣುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !