June 25, 2026
Thursday, June 25, 2026
spot_img

SRH vs RR | 16 ಎಸೆತದಲ್ಲಿ ಫಿಫ್ಟಿ! ಎಲಿಮಿನೇಟರ್‌ನಲ್ಲಿ ವೈಭವ್ ಬ್ಯಾಟ್‌ಗೆ ನಡುಗಿದ ಹೈದರಾಬಾದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಮತ್ತೊಮ್ಮೆ ತಮ್ಮ ಭರ್ಜರಿ ಬ್ಯಾಟಿಂಗ್‌ನಿಂದ ಅಭಿಮಾನಿಗಳ ಗಮನ ಸೆಳೆದರು.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ರಾಜಸ್ಥಾನ್ ತಂಡಕ್ಕೆ ವೈಭವ್ ಚಂಡಮಾರುತದ ಆರಂಭ ನೀಡಿದರು. ಆರಂಭದಿಂದಲೇ ಬೌಲರ್‌ಗಳ ಮೇಲೆ ದಾಳಿ ನಡೆಸಿದ ಅವರು ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಸಿಕ್ಸರ್‌ಗಳ ಸುರಿಮಳೆ

ವೈಭವ್ ಅವರ ಅರ್ಧಶತಕದಲ್ಲಿ 8 ಭರ್ಜರಿ ಸಿಕ್ಸರ್ ಹಾಗೂ ಒಂದು ಬೌಂಡರಿ ಸೇರಿತ್ತು. ವಿಶೇಷವೆಂದರೆ ಅವರು ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕವೇ ಅರ್ಧಶತಕದ ಗಡಿ ತಲುಪಿದರು. ಅವರ ಸಿಡಿಲಬ್ಬರದ ಆಟದಿಂದ ರಾಜಸ್ಥಾನ್ ತಂಡ ಕೇವಲ 3.2 ಓವರ್‌ಗಳಲ್ಲೇ 50 ರನ್ ಗಡಿ ದಾಟಿತು. ಪ್ಯಾಟ್ ಕಮ್ಮಿನ್ಸ್ ಎಸೆದ ಓವರ್‌ನಲ್ಲಿ ಸತತ ಬೌಂಡರಿ ಮತ್ತು ಸಿಕ್ಸರ್‌ಗಳಿಂದ 25 ರನ್ ಕಲೆಹಾಕಿ ಪಂದ್ಯವನ್ನು ಸಂಪೂರ್ಣ ರಾಜಸ್ಥಾನ್ ಪರ ತಿರುಗಿಸಿದರು.

ಪ್ಲೇಆಫ್‌ನಲ್ಲಿ ಹೊಸ ದಾಖಲೆ

ಈ ಅರ್ಧಶತಕದೊಂದಿಗೆ ವೈಭವ್ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ಅತಿ ವೇಗವಾಗಿ ಫಿಫ್ಟಿ ಸಿಡಿಸಿದ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಸುರೇಶ್ ರೈನಾ ಅವರ ಹಳೆಯ ದಾಖಲೆಯನ್ನು ಹಿಂದಿಕ್ಕಿದರು. ಜೊತೆಗೆ ಈ ಸೀಸನ್‌ನಲ್ಲಿ 600ಕ್ಕೂ ಹೆಚ್ಚು ರನ್ ಪೂರೈಸಿ, 200ಕ್ಕಿಂತ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರರಾಗಿದ್ದಾರೆ.

ಇದನ್ನೂ ಓದಿ:

ಆರೆಂಜ್ ಕ್ಯಾಪ್ ಮೇಲೆ ವೈಭವ್ ಹಿಡಿತ

ಪ್ರಸ್ತುತ ಸೀಸನ್‌ನಲ್ಲಿ ಈಗಾಗಲೇ ಭರ್ಜರಿ ಫಾರ್ಮ್‌ನಲ್ಲಿರುವ ವೈಭವ್, ಈ ಇನ್ನಿಂಗ್ಸ್ ಮೂಲಕ ಆರೆಂಜ್ ಕ್ಯಾಪ್ ಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿದರು. ಪವರ್‌ಪ್ಲೇಯಲ್ಲೇ ಐದನೇ ಬಾರಿ ಅರ್ಧಶತಕ ಪೂರೈಸಿದ ದಾಖಲೆಗೂ ಅವರು ಪಾತ್ರರಾಗಿದ್ದು, ಐಪಿಎಲ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !