ಎಫ್ಐಎಚ್ ಹಾಕಿ ಮಹಿಳಾ ಜೂ.ವಿಶ್ವಕಪ್: ಜರ್ಮನಿ ವಿರುದ್ಧ 2-1 ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್

ಪೊಚೆಫ್ಸ್ಟ್ರೂಮ್: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಫ್ಐಎಚ್ ಹಾಕಿ ಮಹಿಳಾ ಜೂನಿಯರ್ ವಿಶ್ವಕಪ್‌ನಲ್ಲಿ ತಮ್ಮ ಆರಂಭಿಕ ಪಂದ್ಯದಲ್ಲಿ ವೇಲ್ಸ್ ವಿರುದ್ಧ 5-1 ಗೋಲುಗಳಿಂದ ಅಮೋಘ ಜಯ ಸಾಧಿಸಿದ ನಂತರ, ಸಲಿಮಾ ಟೆಟೆ ನೇತೃತ್ವದ ಭಾರತ ತಂಡವು ಭಾನುವಾರ ಎರಡನೇ ಪೂಲ್ ಡಿ ಪಂದ್ಯದಲ್ಲಿ ಜರ್ಮನಿಯನ್ನು 2-1 ಅಂತರದಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಭಾರತವು ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದೆ.

ಭಾರತದ ಜೂನಿಯರ್ ಮಹಿಳಾ ಗೋಲ್ ಕೀಪರ್ ಬಿಚು ದೇವಿ ಖರಿಬಾಮ್ ಅವರು ಗೋಲ್ ಪೋಸ್ಟ್ ನಲ್ಲಿ ಅಪೂರ್ವ ಪ್ರದರ್ಶನ ನೀಡಿದರೆ, ಲಾಲ್ರೆಮ್ಸಿಯಾಮಿ ಮತ್ತು ಮುಮ್ತಾಜ್ ಖಾನ್ ತಲಾ ಒಂದು ಗೋಲು ಗಳಿಸಿ ಭಾರತಕ್ಕೆ ಜಯ ತಂದುಕೊಟ್ಟರು.

ಆರಂಭಿಕ 2ನೇ ನಿಮಿಷದಲ್ಲಿ ಲಾಲ್ರೆಮ್ಸಿಯಾಮಿ ರೀಬೌಂಡ್ ಅನ್ನು ಎತ್ತಿಕೊಂಡು ಚೆಂಡನ್ನು ಸುಲಭವಾಗಿ ಗೋಲ್ ಪೋಸ್ಟ್‌ಗೆ ದಾಟಿಸಿ, ಮೊದಲ ಗೋಲ್ ಗಳಿಸಿದರು. ನಂತರ 22ನೇ ನಿಮಿಷದಲ್ಲಿ ಭಾರತ ತಂಡದ ವಿರುದ್ಧ ಜರ್ಮನಿ ಮೊದಲ ಗೋಲ್ ಪಡೆಯಿತು. ಕೆಲವೇ ನಿಮಿಷಗಳ ನಂತರ, ಅಂದರೆ 25ನೇ ನಿಮಿಷಕ್ಕೆ ಮುಮ್ತಾಜ್ ಖಾನ್ ಪೆನಾಲ್ಟಿ ಕಾರ್ನರ್ ಬದಲಾವಣೆಯ ಮೂಲಕ ಮತ್ತೊಮ್ಮೆ ಅದ್ಭುತವಾದ ಗೋಲನ್ನು ಪರಿವರ್ತಿಸಿ, ಭಾರತ ತಂಡವನ್ನು 2-1ಕ್ಕೆ ಮುನ್ನಡೆಸಿದರು.

ಆದಾಗ್ಯೂ, ಅಂತಿಮವಾಗಿ ಗೋಲ್ ಕೀಪರ್ ಬಿಚು ದೇವಿ ಖರಿಬಮ್ ಜರ್ಮನಿಗೆ ಸಮಬಲ ಗೋಲು ಗಳಿಸದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ತನ್ನ ಅದ್ಭುತ ಪ್ರದರ್ಶನಕ್ಕಾಗಿ ಬಿಚು ದೇವಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮಂಗಳವಾರ ಭಾರತೀಯ ಜೂನಿಯರ್ ಮಹಿಳಾ ತಂಡವು ಮಲೇಷ್ಯಾ ತಂಡವನ್ನು ಎದುರಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!