ಸುಳ್ಳು ಮತ್ತು ದಾರಿ ತಪ್ಪಿಸುವ ವರದಿ ಬಿತ್ತರಿಸಿದ್ದಕ್ಕೆ ಮೂವರು ಪತ್ರಕರ್ತರ ವಿರುದ್ಧ ಎಫ್‌ಐಆರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದರ ಸುಳ್ಳು ಮತ್ತು ದಾರಿತಪ್ಪಿಸುವ ಸುದ್ದಿಯನ್ನು ಪ್ರಸಾರ ಮಾಡಿದ್ದಾರೆಂದು  ಮಧ್ಯಪ್ರದೇಶ ಪೊಲೀಸರು ಮೂವರು ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ದಾಬೋ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಜೀವ್ ಕೌರವ್ ಅವರ ದೂರಿನ ಮೇರೆಗೆ ಸ್ಥಳೀಯ ಪತ್ರಕರ್ತರಾದ ಕುಂಜ್ಬಿಹಾರಿ ಕೌರವ್, ಅನಿಲ್ ಶರ್ಮಾ ಮತ್ತು ಎನ್.ಕೆ.ಭಟೆಲೆ ವಿರುದ್ಧ ಪೊಲೀಸರು ದಾಬೋ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆಗಸ್ಟ್ 15 ರಂದು ಭಿಂಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ವಾಸಿಸುತ್ತಿರುವ 76 ವರ್ಷದ ಪ್ರಸಾದ್ ವಿಶ್ವಕರ್ಮ ಎಂಬುವವರನ್ನ ಕೈಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಸುಳ್ಳು ವೀಡಿಯೊವನ್ನು ಪತ್ರಕರ್ತರು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. 108ಕ್ಕೆ ಕರೆ ಮಾಡಿದರೂ ಆಂಬ್ಯುಲೆನ್ಸ್ ಸ್ಥಳಕ್ಕೆ ತಲುಪಲಿಲ್ಲ, ಹಾಗಾಗಿ ಕುಟುಂಬ ಸದಸ್ಯರು ರೋಗಿಯನ್ನು ಕೈಗಾಡಿಯಲ್ಲಿ 5 ಕಿಮೀ ದೂರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಜೊತೆಗೆ ಸರ್ಕಾರದ ಯಾವುದೇ ಯೋಜನೆಗಳು ಇವರಿಗೆ ಸಿಗುತ್ತಿಲ್ಲ ಎಂದು ಪತ್ರಕರ್ತರು ಸುದ್ದಿಯನ್ನು ಬಿತ್ತರಿಸಿದ್ದರು ಎಂದು ವರದಿ ಹೇಳಿದೆ.

ವೀಡಿಯೊ ವೈರಲ್ ಆದ ನಂತರ ಭಿಂಡ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸತೀಶ್ ಕುಮಾರ್ ಅವರು ವಿಚಾರಣೆ ನಡೆಸಿ, ಆಂಬ್ಯುಲೆನ್ಸ್‌ಗೆ ರೋಗಿಯ ಕುಟುಂಬಸ್ಥರಿಂದ ಯಾವುದೇ ಕರೆ ಬಂದಿಲ್ಲ. ತಳ್ಳುವ ಗಾಡಿ ಇದ್ದರಿಂದ ಕುಟುಂಬಸ್ಥರು ರೋಗಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆಂಬ್ಯುಲೆನ್ಸ್‌ಗಾಗಿ 108 ಗೆ ಕರೆ ಮಾಡಲಿಲ್ಲ. ಕುಟುಂಬವು ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪಿಂಚಣಿ ಯೋಜನೆಗಳು ಮತ್ತು ಬಿಪಿಎಲ್ ಕಾರ್ಡ್‌ಗಳು ಸೇರಿದಂತೆ ಎಲ್ಲಾ ಸರ್ಕಾರಿ ಸವಲತ್ತುಗಳನ್ನು ಪಡೆಯುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಹರಡಿದ ಸುದ್ದಿ ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಿದೆ. ಇದನ್ನು ಅನುಸರಿಸಿ ದಾಬೋಹ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಡಿಎಂ ಹೇಳಿದರು.

ಐಪಿಸಿಯ ಸೆಕ್ಷನ್ 420, 505 (2) ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 (ಎಫ್) 1 ರ ಅಡಿಯಲ್ಲಿ ಮೂವರು ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಾಗಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!